ಖಾದಿ ಕೇವಲ ಬಟ್ಟೆಯಲ್ಲ, ಅದು ಜೀವನ ತತ್ವ : ಬಸವಪ್ರಭು ಹೊಸಕೇರಿ
ರಾಷ್ಟ್ರಧ್ವಜ ತಯಾರಿಕೆಯಿಂದ ಗ್ರಾಮೀಣ ಉದ್ಯೋಗದವರೆಗೆ ಖಾದಿಯ ಮಹತ್ವ ಬಿಚ್ಚಿಟ್ಟ ಗಾಂಧಿವಾದಿ ಚಿಂತಕ
ಬಸವಪ್ರಭು ಹೊಸಕೇರಿ


ಹೊಸಕೇರಿ


ಧಾರವಾಡ, 23 ಮೇ (ಹಿ.ಸ.) :

ಆ್ಯಂಕರ್ : “ಖಾದಿಯನ್ನು ಕೇವಲ ಬಟ್ಟೆಯೆಂದು ನೋಡಬೇಡಿ. ಅದು ಒಂದು ಜೀವನ ಪದ್ಧತಿ, ಒಂದು ಆರ್ಥಿಕ-ಸಾಮಾಜಿಕ ಚಿಂತನೆ. ಖಾದಿ ಖರೀದಿಸುವುದು ಅಂದರೆ ಕೇವಲ ಬಟ್ಟೆ ಕೊಳ್ಳುವುದಲ್ಲ, ರೈತ, ನೂಲುಗಾರ, ನೇಕಾರ ಮತ್ತು ಗ್ರಾಮೀಣ ಸಮಾಜದ ಬದುಕಿಗೆ ಬೆಂಬಲ ನೀಡುವುದು” ಎಂದು ಧಾರವಾಡ ತಾಲ್ಲೂಕು ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು ಹಾಗೂ ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ ಹೇಳಿದ್ದಾರೆ.

ಧಾರವಾಡದಲ್ಲಿ ಗಾಂಧಿವಾದ, ಖಾದಿ, ಗ್ರಾಮೀಣ ಆರ್ಥಿಕತೆ ಹಾಗೂ ರಾಷ್ಟ್ರಧ್ವಜ ತಯಾರಿಕೆಯ ಕುರಿತಾಗಿ ತಮ್ಮ ಅನುಭವ ಮತ್ತು ಚಿಂತನೆಗಳನ್ನು ಹಿಂದುಸ್ತಾನ ಸಮಾಚಾರ ಸುದ್ದಿ ಸಂಸ್ಥೆ ಜೊತೆ ಹಂಚಿಕೊಂಡಿರುವ ಬಸವಪ್ರಭು ಹೊಸಕೇರಿ, ಖಾದಿಯ ಹಿಂದೆ ಅಡಗಿರುವ ರಾಷ್ಟ್ರೀಯತೆ, ಸ್ವಾವಲಂಬನೆ ಮತ್ತು ಮಾನವೀಯ ಮೌಲ್ಯಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ.

ಕಾಲೇಜು ದಿನಗಳಿಂದಲೇ ಖಾದಿ ಜೀವನದ ಭಾಗ

ಬಸವಪ್ರಭು ಹೊಸಕೇರಿ ಕಾಲೇಜು ದಿನಗಳಿಂದಲೇ ಖಾದಿ ಧರಿಸುತ್ತಾ ಬಂದಿದ್ದಾರೆ. ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಸಂಪೂರ್ಣ ಕ್ರಾಂತಿ ಚಳವಳಿಯ ಯುವ ಘಟಕವಾದ “ಛಾತ್ರ ಯುವ ಸಂಘರ್ಷ ವಾಹಿನಿ” ಸಂಪರ್ಕಕ್ಕೆ ಬಂದದ್ದು ಮತ್ತು ನಂತರ ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ಒಡನಾಟವೇ ತಮ್ಮಲ್ಲಿ ಖಾದಿಯ ಬಗ್ಗೆ ಅಪಾರ ನಿಷ್ಠೆ ಬೆಳೆಸಿತು ಎಂದು ಅವರು ಹೇಳಿದರು.

“ಆ ದಿನಗಳಿಂದ ಇಂದಿನವರೆಗೂ ನಾನು ಖಾದಿಯನ್ನೇ ಧರಿಸುತ್ತಿದ್ದೇನೆ. ಖಾದಿ ಕೇವಲ ಉಡುಪು ಅಲ್ಲ; ಅದು ಜೀವನದ ಮೌಲ್ಯಗಳನ್ನು ನೆನಪಿಸುವ ಮಾರ್ಗ” ಎಂದು ಅವರು ಹೇಳಿದರು.

ಗರಗ ಖಾದಿ ಕೇಂದ್ರದ ರಾಷ್ಟ್ರೀಯ ಮಹತ್ವ

ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿರುವ ಧಾರವಾಡ ತಾಲ್ಲೂಕು ಕ್ಷೇತ್ರೀಯ ಸೇವಾ ಸಂಘದ ಕೇಂದ್ರವು ಭಾರತೀಯ ಮಾನದಂಡಗಳ ಬ್ಯೂರೋ (BIS) ಮಾನ್ಯತೆ ಪಡೆದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರವಾಗಿದೆ. ಕೈಯಿಂದ ನೆಯ್ದ ರಾಷ್ಟ್ರಧ್ವಜ ತಯಾರಿಸಲು ದೇಶದಲ್ಲೇ ಅಪರೂಪದ ಮಾನ್ಯತೆ ಪಡೆದಿರುವ ಕೇಂದ್ರಗಳಲ್ಲಿ ಇದು ಪ್ರಮುಖವಾದುದು.

“1975ರಿಂದ ಆರಂಭದಲ್ಲಿ ದೇಶದಲ್ಲಿ ರಾಷ್ಟ್ರಧ್ವಜ ತಯಾರಿಸಲು ಅಧಿಕೃತ ಅನುಮತಿ ಪಡೆದಿದ್ದವು ಕೇವಲ ಎರಡು ಕೇಂದ್ರಗಳು ಮಾತ್ರ. ಮಹಾರಾಷ್ಟ್ರದ ಲಾತೂರ್ ಸಮೀಪದ ಉದಗೀರ್ ಖಾದಿ ಕೇಂದ್ರ ಮತ್ತು ಧಾರವಾಡದ ಗರಗ ಖಾದಿ ಕೇಂದ್ರ,” ಎಂದು ಬಸವಪ್ರಭು ಹೊಸಕೇರಿ ಸ್ಮರಿಸಿದರು.

ಶಂಕರರಾವ್ ಕುರ್ತಕೋಟಿಯವರ ಕೊಡುಗೆ

ಗರಗ ಖಾದಿ ಕೇಂದ್ರ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಗುರುತಿಸಿಕೊಳ್ಳಲು ಮಾಜಿ ಅಧ್ಯಕ್ಷ ಶಂಕರರಾವ್ ಕುರ್ತಕೋಟಿಯವರ ಪಾತ್ರ ಅಪಾರ ಎಂದು ಅವರು ಹೇಳಿದರು.

“ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಈ ಮಹತ್ವದ ಹೊಣೆಗಾರಿಕೆಯನ್ನು ತರಲು ಶಂಕರರಾವ್ ಕುರ್ತಕೋಟಿಯವರು ಯಶಸ್ವಿಯಾದರು. ಕಠಿಣ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ ಬಳಿಕ ಗರಗ ಕೇಂದ್ರ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿತು,” ಎಂದು ಹೇಳಿದರು.

ರಾಷ್ಟ್ರಪತಿ ಭವನದ ಮೇಲೂ ಗರಗದ ಧ್ವಜ

ಗರಗದಲ್ಲಿ ತಯಾರಾಗುವ ರಾಷ್ಟ್ರಧ್ವಜಗಳು ರಾಷ್ಟ್ರಪತಿ ಭವನ, ಸಂಸತ್ ಭವನ, ಕೆಂಪುಕೋಟೆ, ಸುಪ್ರೀಂ ಕೋರ್ಟ್, ರಾಜ್ಯ ವಿಧಾನಸಭೆಗಳು, ಸೈನಿಕ ಕೇಂದ್ರಗಳು ಮತ್ತು ರಾಯಭಾರ ಕಚೇರಿಗಳ ಮೇಲೂ ಹಾರಾಡುತ್ತಿವೆ ಎಂಬುದು ಗರಗ ಕೇಂದ್ರದ ಹೆಮ್ಮೆ ಎಂದು ಬಸವಪ್ರಭು ಹೊಸಕೇರಿ ಹೇಳಿದರು.

“ನಮ್ಮ ಕೇಂದ್ರದಲ್ಲಿ ತಯಾರಾಗುವ BIS ಪ್ರಮಾಣಿತ ರಾಷ್ಟ್ರಧ್ವಜಗಳು ದೇಶದ ಅತ್ಯಂತ ಪ್ರತಿಷ್ಠಿತ ಕಟ್ಟಡಗಳ ಮೇಲೆ ಹಾರಾಡುತ್ತವೆ. ಇದು ಕೇವಲ ಗರಗ ಗ್ರಾಮಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೂ ಹೆಮ್ಮೆ,” ಎಂದು ಹೇಳಿದರು.

ವರ್ಷಕ್ಕೆ ಸಾವಿರಾರು ಮೀಟರ್ ಧ್ವಜ ಬಟ್ಟೆ

ಗರಗ ಕೇಂದ್ರದಲ್ಲಿ ಪ್ರತಿ ವರ್ಷ ಸುಮಾರು 35 ರಿಂದ 40 ಸಾವಿರ ಮೀಟರ್ ಖಾದಿ ಬಟ್ಟೆ ಉತ್ಪಾದನೆಯಾಗುತ್ತದೆ. ಅದರಲ್ಲಿ ಸುಮಾರು 25 ರಿಂದ 30 ಸಾವಿರ ಮೀಟರ್ ರಾಷ್ಟ್ರಧ್ವಜ ತಯಾರಿಕೆಗೆ ಬಳಸುವ ಬಟ್ಟೆಯೇ ಆಗಿದೆ.

ಸುತ್ತಮುತ್ತಲಿನ ಏಳು ಗ್ರಾಮಗಳ ನೂಲುಗಾರರು ಮತ್ತು ನೇಕಾರರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಧ್ವಜ ಉತ್ಪಾದನೆಯಿಂದ ವರ್ಷಕ್ಕೆ ₹1.2 ರಿಂದ ₹1.5 ಕೋಟಿ ವಹಿವಾಟು ನಡೆಯುತ್ತಿದೆ ಎಂದು ಬಸವಪ್ರಭು ಹೊಸಕೇರಿ ಮಾಹಿತಿ ನೀಡಿದರು.

ಧ್ವಜದ ತಾಂತ್ರಿಕ ಗುಣಮಟ್ಟ

ರಾಷ್ಟ್ರಧ್ವಜ ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಅತ್ಯಂತ ಆದ್ಯತೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

“ಧ್ವಜದ ಬಟ್ಟೆಯಲ್ಲಿ 36 ಕೌಂಟ್ನ ಉತ್ತಮ ಗುಣಮಟ್ಟದ ಜಯಧರ ಹತ್ತಿ ಬಳಸಲಾಗುತ್ತದೆ. ಬಟ್ಟೆಯಲ್ಲಿ 40 ವಾರ್ಪ್ ಮತ್ತು 38 ವೆಫ್ಟ್ ಇರುತ್ತವೆ. ಪ್ರತಿ ಚದರ ಮೀಟರ್ ಬಟ್ಟೆಯ ತೂಕ 205 ಗ್ರಾಂ ±5 ರಿಂದ 10 ಗ್ರಾಂ ಇರಬೇಕು. ಬಟ್ಟೆ ನೆಯ್ದ ಬಳಿಕ ಅದನ್ನು ಮುಂಬೈನ ಖಾದಿ ಡೈಯರ್ಸ್ ಮತ್ತು ಪ್ರಿಂಟರ್ಸ್ಗೆ ಕಳುಹಿಸಿ ಬಣ್ಣ ಹಚ್ಚಿ ಹೊಲೆಯಲಾಗುತ್ತದೆ. ನಂತರ ISI ಮಾನದಂಡಗಳ ಪರಿಶೀಲನೆ ನಡೆಯುತ್ತದೆ,” ಎಂದು ಹೇಳಿದರು.

ಒಂಬತ್ತು ಗಾತ್ರದ ರಾಷ್ಟ್ರಧ್ವಜಗಳು

ರಾಷ್ಟ್ರಧ್ವಜಗಳನ್ನು ಒಂಬತ್ತು ವಿಭಿನ್ನ ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಆರು ಗಾತ್ರಗಳಿಗೆ BIS ಮುದ್ರೆ ದೊರೆಯುತ್ತದೆ.

“ಅತಿದೊಡ್ಡ ಧ್ವಜ 14x21 ಅಡಿ ಗಾತ್ರದಲ್ಲಿದ್ದು, ಅತಿಚಿಕ್ಕದು 2x3 ಅಡಿ ಗಾತ್ರದಲ್ಲಿರುತ್ತದೆ. ಹೆಚ್ಚಿನ ಧ್ವಜಗಳನ್ನು ನವದೆಹಲಿಯ ಖಾದಿ ಭವನಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವು ದೇಶದ ಮೂಲೆಮೂಲೆಗಳಿಗೆ ತಲುಪುತ್ತವೆ,” ಎಂದು ಹೇಳಿದರು.

ಗಾಂಧಿ ವಿರುದ್ಧದ ಮನೋಭಾವದ ಬಗ್ಗೆ ಕಳವಳ

ಇಂದಿನ ಪೀಳಿಗೆಯಲ್ಲಿ ಗಾಂಧಿಜಿಯವರ ವಿರುದ್ಧ ಉದ್ದೇಶಪೂರ್ವಕ ದ್ವೇಷ ಮತ್ತು ತಪ್ಪುಮಾಹಿತಿ ಹಬ್ಬಿಸಲಾಗುತ್ತಿದೆ ಎಂಬ ಆತಂಕವನ್ನೂ ಬಸವಪ್ರಭು ಹೊಸಕೇರಿ ವ್ಯಕ್ತಪಡಿಸಿದರು.

“ಗಾಂಧಿಯನ್ನು ಓದದವರು, ಅರ್ಥಮಾಡಿಕೊಳ್ಳದವರು ಮತ್ತು ಅನುಭವಿಸದವರೇ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಪ್ರಚಾರ ಮಾಡುತ್ತಿದ್ದಾರೆ. ಗಾಂಧಿ ಎಂದರೆ ಒಬ್ಬ ವ್ಯಕ್ತಿಯಲ್ಲ; ಅದು ಅಹಿಂಸೆ, ಸತ್ಯ ಮತ್ತು ಮಾನವೀಯತೆಯ ಚಿಂತನೆ,” ಎಂದು ಹೇಳಿದರು.

“ಗಾಂಧಿಯನ್ನು ಅಳಿಸಲು ಸಾಧ್ಯವಿಲ್ಲ”

“ಇಂದು ಕೆಲವರು ಗಾಂಧಿ ತತ್ವವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಅಸಾಧ್ಯ. ಗಾಂಧಿ ಭಾರತದ ಗಡಿಗಳನ್ನು ದಾಟಿ ಜಗತ್ತಿನ ಚಿಂತನೆಯಾಗಿ ಬೆಳೆದಿದ್ದಾರೆ,” ಎಂದು ಬಸವಪ್ರಭು ಹೊಸಕೇರಿ ಅಭಿಪ್ರಾಯಪಟ್ಟರು.

“ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಅಮೆರಿಕದ ಗಾಂಧಿ ಎಂದು ಕರೆಯುತ್ತಾರೆ. ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಗಾಂಧಿ ಎಂದು ಖ್ಯಾತರು. ಅಹಿಂಸೆಯ ಮೂಲಕ ನ್ಯಾಯಕ್ಕಾಗಿ ಹೋರಾಡುವ ಎಲ್ಲರಲ್ಲೂ ಗಾಂಧಿಯ ಪ್ರಭಾವ ಕಾಣುತ್ತದೆ,” ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿಯ ಪಾತ್ರ

“ಭಾರತದ ಸ್ವಾತಂತ್ರ್ಯ ಚಳವಳಿ ಗಾಂಧಿಜಿಗೂ ಮುನ್ನವೇ ಆರಂಭವಾಗಿತ್ತು. ಸ್ವಾತಂತ್ರ್ಯವನ್ನು ಕೇವಲ ಗಾಂಧಿಯವರ ಸಾಧನೆ ಎಂದು ಹೇಳುವುದು ಸರಿಯಲ್ಲ. ಆದರೆ ಗಾಂಧಿಯವರ ಕೊಡುಗೆ ಅಪಾರ,” ಎಂದು ಅವರು ಹೇಳಿದರು.

“1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಗಾಂಧಿಜಿ ಚಂಪಾರಣದಲ್ಲಿ ಹೋರಾಟ ಆರಂಭಿಸಿದರು. ನಂತರ ಕ್ವಿಟ್ ಇಂಡಿಯಾ ಚಳವಳಿವರೆಗೆ ಅನೇಕ ಹೋರಾಟಗಳನ್ನು ಮುನ್ನಡೆಸಿದರು. ಮದ್ಯಪಾನ ವಿರೋಧ, ಅಸ್ಪೃಶ್ಯತೆ ನಿರ್ಮೂಲನೆ, ಹರಿಜನರ ಉದ್ಧಾರ, ಮಹಿಳಾ ಸಬಲೀಕರಣ, ಅನಕ್ಷರತೆ ನಿವಾರಣೆ, ಖಾದಿ ಮತ್ತು ಗ್ರಾಮೋದ್ಯೋಗ—ಇವೆಲ್ಲವೂ ಗಾಂಧಿಯವರ ಹೋರಾಟದ ಭಾಗವಾಗಿದ್ದವು,” ಎಂದು ಹೇಳಿದರು.

“ಖಾದಿ ಎಂದರೆ ಏನು?”

“ಬ್ರಿಟಿಷರನ್ನು ಓಡಿಸುವುದು ರಾಜಕೀಯ ಹೋರಾಟವಾಗಿದ್ದರೆ, ದೇಶದ ಜನರನ್ನು ಸಂಕಷ್ಟಗಳಿಂದ ಮುಕ್ತಗೊಳಿಸುವುದು ಅದರ ಮೂಲ ಉದ್ದೇಶವಾಗಿತ್ತು. ಖಾದಿ ಅದರ ಒಂದು ಪ್ರಮುಖ ಸಾಧನವಾಗಿತ್ತು,” ಎಂದು ಬಸವಪ್ರಭು ಹೊಸಕೇರಿ ಹೇಳಿದರು.

“ಜನರು ಖಾದಿಯನ್ನು ಸಾಮಾನ್ಯ ಬಟ್ಟೆಯಂತೆ ನೋಡುತ್ತಾರೆ. ಆದರೆ ಖಾದಿಯ ಹಿಂದೆ ಒಂದು ಆರ್ಥಿಕ ವ್ಯವಸ್ಥೆ, ಮಾನವೀಯ ಮೌಲ್ಯ ಮತ್ತು ಸ್ವಾವಲಂಬನೆಯ ತತ್ವ ಇದೆ,” ಎಂದು ಅವರು ಹೇಳಿದರು.

ಖಾದಿ ಕುರಿತ ಅಸಮಾಧಾನಗಳು

ಖಾದಿ ದುಬಾರಿ, ನಿರ್ವಹಣೆ ಕಷ್ಟ, ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಆಕರ್ಷಕವಾಗಿ ಕಾಣುವುದಿಲ್ಲ ಎಂಬ ದೂರುಗಳಿವೆ ಎಂದು ಅವರು ಒಪ್ಪಿಕೊಂಡರು.

“ಒಮ್ಮೆ ಕೃತಕ ನಾರುಗಳಿಂದ ತಯಾರಾದ ಬಟ್ಟೆಗಳು ದುಬಾರಿಯಾಗಿದ್ದವು. ಆದರೆ ಈಗ ಅವು ಅತ್ಯಂತ ಅಗ್ಗವಾಗಿವೆ. ಶುದ್ಧ ಹತ್ತಿ, ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳು ಮಾತ್ರ ದುಬಾರಿಯಾಗಿವೆ. ಖಾದಿಯನ್ನು ಪ್ರತಿದಿನ ಇಸ್ತ್ರಿ ಮಾಡಬೇಕು. ಸಿಂಥೆಟಿಕ್ ಬಟ್ಟೆಯಂತೆ ಎರಡು-ಮೂರು ದಿನ ಧರಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.

“ಇಂದಿನ ಜಗತ್ತಿನಲ್ಲಿ ಎಲ್ಲವೂ ಆಕರ್ಷಕವಾಗಿರಬೇಕು ಎನ್ನುವ ಮನೋಭಾವ ಬೆಳೆದಿದೆ. ಅಂತಹ ಸಂದರ್ಭದಲ್ಲಿ ಖಾದಿ ಜನರನ್ನು ಸೆಳೆಯಲು ಕಷ್ಟವಾಗುತ್ತದೆ,” ಎಂದು ಹೇಳಿದರು.

“₹100 ಖಾದಿ ಖರೀದಿಸಿದರೆ ಯಾರಿಗೆ ಲಾಭ?”

ಖಾದಿಯ ಆರ್ಥಿಕ ಚಕ್ರವನ್ನು ವಿವರಿಸಿದ ಬಸವಪ್ರಭು ಹೊಸಕೇರಿ, “₹100 ಮೌಲ್ಯದ ಖಾದಿ ಖರೀದಿಸಿದರೆ ₹50 ನೇರವಾಗಿ ನೂಲುಗಾರರು ಮತ್ತು ನೇಕಾರರಿಗೆ ಹೋಗುತ್ತದೆ. ₹33 ಕಚ್ಚಾ ವಸ್ತುಗಳಿಗೆ ಬಳಸಲಾಗುತ್ತದೆ. ₹8 ಆಡಳಿತ ವೆಚ್ಚಕ್ಕೆ ಮತ್ತು ₹9 ಸಾರಿಗೆಗೆ ಬಳಸಲಾಗುತ್ತದೆ,” ಎಂದು ಹೇಳಿದರು.

“ಖಾದಿ ಖರೀದಿಸುವ ಮೂಲಕ ನೀವು ಹತ್ತಿ, ರೇಷ್ಮೆ, ಉಣ್ಣೆ, ಜ್ಯೂಟ್ ಬೆಳೆಸುವ ರೈತರಿಗೆ ಹಾಗೂ ಅದನ್ನು ಉತ್ಪಾದಿಸುವ ಕಾರ್ಮಿಕರಿಗೆ ನೇರ ಸಹಾಯ ಮಾಡುತ್ತೀರಿ,” ಎಂದು ಹೇಳಿದರು.

“ರೈತ ದೇಶದ ಬೆನ್ನೆಲುಬು ಎಂದರೆ, ಖಾದಿ ಅವರಿಗೆ ಬೆಂಬಲ”

“ರೈತ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ಇಂದು ರೈತನಿಗೆ ಬೆನ್ನೂ ಇಲ್ಲ, ಎಲುಬೂ ಇಲ್ಲದ ಪರಿಸ್ಥಿತಿ ಬಂದಿದೆ. ಖಾದಿ ಖರೀದಿಸುವುದರಿಂದ ರೈತ ಮತ್ತು ಗ್ರಾಮೀಣ ಆರ್ಥಿಕತೆಗೆ ನೇರ ಬೆಂಬಲ ಸಿಗುತ್ತದೆ,” ಎಂದು ಬಸವಪ್ರಭು ಹೊಸಕೇರಿ ಅಭಿಪ್ರಾಯಪಟ್ಟರು.

“ಖಾದಿ ದೇಶಭಕ್ತಿಯ ಘೋಷಣೆಗಿಂತ ದೊಡ್ಡದು”

“ದೇಶಭಕ್ತಿಯ ಘೋಷಣೆ ಕೂಗುವುದಕ್ಕಿಂತ ಖಾದಿ ಖರೀದಿಸುವುದೇ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ. ಖಾದಿ ಕೇವಲ ಬಟ್ಟೆಯಲ್ಲ; ಅದು ಪರಿಸರ ಸ್ನೇಹಿ, ಗ್ರಾಮೀಣ ಉದ್ಯೋಗ ಸೃಷ್ಟಿಸುವ ಹಾಗೂ ಮಾನವೀಯತೆಯನ್ನು ಉಳಿಸುವ ಜೀವನ ತತ್ವ,” ಎಂದು ಹೇಳಿದರು.

ವರ್ಷಪೂರ್ತಿ ಉದ್ಯೋಗ ನೀಡುವ ಶಕ್ತಿ

ಮಹಾತ್ಮ ಗಾಂಧಿಯವರ ಮಾತು ಉಲ್ಲೇಖಿಸಿದ ಬಸವಪ್ರಭು ಹೊಸಕೇರಿ, “ಕೃಷಿಯ ನಂತರ ದೇಶದಲ್ಲಿ ವರ್ಷಪೂರ್ತಿ ಉದ್ಯೋಗ ನೀಡಬಲ್ಲ ಅತ್ಯಂತ ದೊಡ್ಡ ಶಕ್ತಿ ಖಾದಿಯಲ್ಲಿದೆ. ಅದು ಗ್ರಾಮದಲ್ಲೇ ಉದ್ಯೋಗ ಸೃಷ್ಟಿಸಿ ನಗರೀಕರಣದ ದುಷ್ಪರಿಣಾಮಗಳನ್ನು ತಡೆಯಬಲ್ಲದು,” ಎಂದು ಹೇಳಿದರು.

“ಖಾದಿ ಧರಿಸುವುದು ಅಂದರೆ ಕೇವಲ ಉಡುಪು ಧರಿಸುವುದಲ್ಲ; ಅದು ಮಾನವೀಯತೆ, ಸ್ವಾವಲಂಬನೆ ಮತ್ತು ಗ್ರಾಮೀಣ ಭಾರತದ ಬದುಕಿನೊಂದಿಗೆ ನಂಟು ಬೆಳೆಸಿಕೊಳ್ಳುವುದು,” ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande