ಅಮೆರಿಕ ವಿದೇಶಾಂಗ ಸಚಿವ ರೂಬಿಯೋ ಪ್ರಧಾನಿ ಮೋದಿ ಭೇಟಿ
ಟ್ರಂಪ್ ಪರವಾಗಿ ವೈಟ್ ಹೌಸ್ಗೆ ಆಹ್ವಾನ
Meet


ನವದೆಹಲಿ, 23 ಮೇ (ಹಿ.ಸ.) :

ಆ್ಯಂಕರ್ : ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರೂಬಿಯೋ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಸಮೀಪ ಭವಿಷ್ಯದಲ್ಲಿ ವೈಟ್ ಹೌಸ್ಗೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದರು.

ನವದೆಹಲಿಯಲ್ಲಿ ನಡೆದ ಈ ಮಹತ್ವದ ಭೇಟಿಯಲ್ಲಿ ಭಾರತ–ಅಮೆರಿಕ ಸಮಗ್ರ ಜಾಗತಿಕ ತಂತ್ರಾತ್ಮಕ ಸಹಭಾಗಿತ್ವದ ಪ್ರಗತಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ರಕ್ಷಣಾ ಸಹಕಾರ, ತಂತ್ರಜ್ಞಾನ, ವ್ಯಾಪಾರ ಮತ್ತು ಹೂಡಿಕೆ, ಇಂಧನ ಭದ್ರತೆ, ಸಂಪರ್ಕ ವ್ಯವಸ್ಥೆ, ಶಿಕ್ಷಣ ಹಾಗೂ ಜನ-ಜನರ ನಡುವಿನ ಬಾಂಧವ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ವಿಸ್ತರಿಸುತ್ತಿರುವ ಬಗ್ಗೆ ರೂಬಿಯೋ ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿ ಸೇರಿದಂತೆ ವಿವಿಧ ಜಾಗತಿಕ ವಿಚಾರಗಳ ಕುರಿತು ಅಮೆರಿಕದ ನಿಲುವನ್ನು ರೂಬಿಯೋ ಹಂಚಿಕೊಂಡರು. ಪ್ರತಿಯಾಗಿ ಪ್ರಧಾನಿ ಮೋದಿ, ಶಾಂತಿ ಸ್ಥಾಪನೆಗೆ ಭಾರತ ನಿರಂತರ ಬೆಂಬಲ ನೀಡುತ್ತಿರುವುದನ್ನು ಪುನರುಚ್ಚರಿಸಿ, ಎಲ್ಲ ರೀತಿಯ ಸಂಘರ್ಷಗಳಿಗೆ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗವೇ ಪರಿಹಾರವಾಗಬೇಕು ಎಂದು ಅಭಿಪ್ರಾಯಪಟ್ಟರು.

ಅದೇ ವೇಳೆ, ಅಧ್ಯಕ್ಷ ಟ್ರಂಪ್ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸುವಂತೆ ಮೋದಿ ರೂಬಿಯೋ ಅವರಿಗೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿಯೂ ಟ್ರಂಪ್ ಅವರೊಂದಿಗೆ ನಿರಂತರ ಸಂವಾದ ಮುಂದುವರಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಭೇಟಿಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಮೆರಿಕದ ವಿದೇಶಾಂಗ ಸಚಿವ ರೂಬಿಯೋ ಅವರನ್ನು ಸ್ವಾಗತಿಸಿರುವುದು ಸಂತಸದ ವಿಚಾರ ಎಂದು ತಿಳಿಸಿದ್ದಾರೆ. ಭಾರತ–ಅಮೆರಿಕ ಜಾಗತಿಕ ತಂತ್ರಾತ್ಮಕ ಸಹಭಾಗಿತ್ವದಲ್ಲಿ ಆಗುತ್ತಿರುವ ನಿರಂತರ ಪ್ರಗತಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ-ಭದ್ರತೆ ಕುರಿತ ಮಹತ್ವದ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಹಿತಾಸಕ್ತಿಗಾಗಿ ಭಾರತ ಮತ್ತು ಅಮೆರಿಕ ಮುಂದುವರಿದು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದೂ ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಜಿಯೋ ಗೋರ ಕೂಡ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯವರೊಂದಿಗೆ ನಡೆದ ಸಭೆಯಲ್ಲಿ ರೂಬಿಯೋ ಅವರೊಂದಿಗೆ ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಭದ್ರತೆ, ವ್ಯಾಪಾರ ಮತ್ತು ಮಹತ್ವದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಕುರಿತು ಫಲಪ್ರದ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.

ಭಾರತವು ಅಮೆರಿಕದ ಪ್ರಮುಖ ತಂತ್ರಾತ್ಮಕ ಪಾಲುದಾರ ರಾಷ್ಟ್ರವಾಗಿದ್ದು, ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ನಿರ್ಮಾಣಕ್ಕೆ ಉಭಯ ರಾಷ್ಟ್ರಗಳು ಬದ್ಧವಾಗಿವೆ ಎಂದು ಸರ್ಜಿಯೋ ಗೋರ ಹೇಳಿದ್ದಾರೆ.

ಮತ್ತೊಂದು ಪೋಸ್ಟ್ನಲ್ಲಿ, ಅಧ್ಯಕ್ಷ ಟ್ರಂಪ್ ಪರವಾಗಿ ಪ್ರಧಾನಿ ಮೋದಿಗೆ ವೈಟ್ ಹೌಸ್ಗೆ ಭೇಟಿ ನೀಡುವ ಆಹ್ವಾನ ನೀಡಲಾಗಿದೆ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande