
ಲೇಹ್, 23 ಮೇ (ಹಿ.ಸ.) :
ಆ್ಯಂಕರ್ : ಲೇಹ್ ಸಮೀಪದ ಪರ್ವತ ಪ್ರದೇಶ ಟ್ಯಾಂಗ್ಸ್ಟೆಯಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಘಟನೆ ಬುಧವಾರ ನಡೆದಿದ್ದು, ಹೆಲಿಕಾಪ್ಟರ್ನಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಇಂದು ಮಾಹಿತಿ ನೀಡಿದ ಸೇನಾ ಅಧಿಕಾರಿಗಳು, ಅಪಘಾತದಲ್ಲಿ ಒಬ್ಬ ಲೆಫ್ಟಿನೆಂಟ್ ಕರ್ನಲ್, ಒಬ್ಬ ಮೇಜರ್ ಹಾಗೂ 3ನೇ ಪದಾತಿಸೈನ್ಯದ ವಿಭಾಗದ ಕಮಾಂಡಿಂಗ್ ಜನರಲ್ ಆಫೀಸರ್ ಮೇಜರ್ ಜನರಲ್ ಸಚಿನ್ ಮೆಹ್ತಾ ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಏಕ ಎಂಜಿನ್ ಹೊಂದಿದ್ದ ಚೀತಾ ಹೆಲಿಕಾಪ್ಟರ್ ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಿ ಅಪಘಾತಕ್ಕೀಡಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. “ಇದು ಪವಾಡಕ್ಕಿಂತ ಕಡಿಮೆ ಅಲ್ಲ” ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಅಪಘಾತದ ನಿಖರ ಕಾರಣ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಇದೇ ವೇಳೆ, ಭಾರತೀಯ ಸೇನೆ ತನ್ನ ದಶಕಗಳಷ್ಟು ಹಳೆಯದಾದ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳನ್ನು ಮುಂದಿನ ಒಂದೆರಡು ವರ್ಷಗಳಲ್ಲಿ ಹಂತಹಂತವಾಗಿ ಸೇವೆಯಿಂದ ಹಿಂಪಡೆಯಲು ತೀರ್ಮಾನಿಸಿದೆ. ಮುಂದಿನ ಎಂಟರಿಂದ ಹತ್ತು ವರ್ಷಗಳ ಅವಧಿಯಲ್ಲಿ ಅವುಗಳ ಬದಲಿಗೆ ಹೊಸ ಲಘು ಉಪಯುಕ್ತ ಹೆಲಿಕಾಪ್ಟರ್ಗಳನ್ನು ಸೇರ್ಪಡೆಗೊಳಿಸಲಾಗುತ್ತದ್ದು, ಇದು ಆರ್ಮಿ ಏವಿಯೇಷನ್ ಕಾರ್ಪ್ಸ್ನ ಆಧುನೀಕರಣ ಯೋಜನೆಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯ ಬದಲಿ ಕಾರ್ಯತಂತ್ರದಡಿ ದೇಶೀಯವಾಗಿ ತಯಾರಾಗುವ ಲಘು ಉಪಯುಕ್ತ ಹೆಲಿಕಾಪ್ಟರ್ಗಳನ್ನು ಸೇರ್ಪಡೆಗೊಳಿಸುವ ಜೊತೆಗೆ ತಾತ್ಕಾಲಿಕ ಅಗತ್ಯಗಳಿಗೆ ಗುತ್ತಿಗೆ ಆಧಾರಿತ ಹೆಲಿಕಾಪ್ಟರ್ ಸೇವೆಯನ್ನೂ ಬಳಸಿಕೊಳ್ಳಲಾಗುತ್ತದೆ.
ಪ್ರಸ್ತುತ ಸೇನೆಗೆ ಸುಮಾರು 250 ಹೊಸ ಹೆಲಿಕಾಪ್ಟರ್ಗಳ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಇದುವರೆಗೆ ರಕ್ಷಣಾ ಪಡೆಗಳ ಬಳಕೆಗೆ 625ಕ್ಕೂ ಹೆಚ್ಚು ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳನ್ನು ತಯಾರಿಸಿತ್ತು. ಆದರೆ ಇನ್ನು ಮುಂದೆ ಈ ಮಾದರಿಯ ಹೆಲಿಕಾಪ್ಟರ್ಗಳ ಉತ್ಪಾದನೆ ನಡೆಯುವುದಿಲ್ಲ. ಸಂಸ್ಥೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಗೆ ಮಾತ್ರ ಸೀಮಿತವಾಗಲಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳು ಸಿಯಾಚಿನ್ ಹಿಮನದಿ ಸೇರಿದಂತೆ ಎತ್ತರದ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಅಗತ್ಯ ವಸ್ತು, ಔಷಧಿ ಮತ್ತು ಸಿಬ್ಬಂದಿ ಸಾಗಣೆಗಾಗಿ ಪ್ರಮುಖ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿರುವ ಹಲವು ಅಪಘಾತಗಳು ಈ ಹೆಲಿಕಾಪ್ಟರ್ಗಳ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿವೆ.
ಕಳೆದ 10ರಿಂದ 12 ವರ್ಷಗಳಲ್ಲಿ 15ಕ್ಕೂ ಹೆಚ್ಚು ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳು ಅಪಘಾತಕ್ಕೀಡಾಗಿದ್ದು, ಅನೇಕ ಪೈಲಟ್ಗಳು ಪ್ರಾಣ ಕಳೆದುಕೊಂಡಿದ್ದಾರೆ.
ಆದಾಗ್ಯೂ, ಪ್ರಸ್ತುತ ಬಳಕೆಯಲ್ಲಿರುವ ಹೆಲಿಕಾಪ್ಟರ್ಗಳು ತಾಂತ್ರಿಕವಾಗಿ ಇನ್ನೂ ಕೆಲವು ವರ್ಷಗಳ ಕಾಲ ಹಾರಾಟಕ್ಕೆ ಯೋಗ್ಯವಾಗಿವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.