
ನವದೆಹಲಿ, 22 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತದ ಮೂಲಕ ಪ್ರಕೃತಿ, ಅಭಿವೃದ್ಧಿ ಮತ್ತು ಸಮೂಹ ಸಮೃದ್ಧಿಯ ಮಹತ್ವವನ್ನು ಸಾರಿದರು. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡ ಸಂದೇಶದಲ್ಲಿ ಪ್ರಕೃತಿ ಮತ್ತು ಮಾನವ ಸಮಾಜದ ಸಮಾನ ಉನ್ನತಿಗೆ ಕರೆ ನೀಡಿದರು.
ಪ್ರಧಾನಿ ಮೋದಿ ಹಂಚಿಕೊಂಡ ಸಂಸ್ಕೃತ ಸುಭಾಷಿತ ಹೀಗಿದೆ:
“ವನಸ್ಪತೇ ಶತವಲ್ಶೋ ವಿ ರೋಹ ಸಹಸ್ರವಲ್ಶಾ ವಿ ವಯಂ ರುಹೇಮ।
ಯಂ ತ್ವಾಮಯಂ ಸ್ವಧಿತಿಸ್ತೆಜಮಾನಃ ಪ್ರಣಿನಾಯ ಮಹತೇ ಸೌಭಗಾಯ॥”
ಈ ಸುಭಾಷಿತದ ಅರ್ಥವನ್ನು ವಿವರಿಸಿದ ಪ್ರಧಾನಮಂತ್ರಿ, ಸಸ್ಯಸಂಪತ್ತು ನೂರಾರು ಹಾಗೂ ಸಾವಿರಾರು ಶಾಖೆಗಳೊಂದಿಗೆ ಸಮೃದ್ಧಿಯಾಗಿ ಬೆಳೆಯಲಿ ಮತ್ತು ಅದರೊಂದಿಗೆ ಮಾನವ ಸಮಾಜವೂ ಉನ್ನತಿ ಹೊಂದಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಪ್ರಕೃತಿಯನ್ನು ಮಹತ್ತರ ಕಲ್ಯಾಣ ಮತ್ತು ಸಮೃದ್ಧಿಗಾಗಿ ಬೆಳೆಸಿದ ದಿವ್ಯಶಕ್ತಿ, ಸಮಸ್ತ ಮಾನವಕುಲಕ್ಕೂ ಮಂಗಳಕಾರಿಯಾಗಲಿ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯ ಈ ಸಂದೇಶವು ಪರಿಸರ ಸಂರಕ್ಷಣೆ, ಹಸಿರು ಅಭಿವೃದ್ಧಿ ಮತ್ತು ಪ್ರಕೃತಿ–ಮಾನವನ ಸಹಜ ಸಹಬಾಳ್ವೆಯ ಮಹತ್ವವನ್ನು ಒತ್ತಿಹೇಳುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಈ ಸಂದೇಶಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.