
ನವದೆಹಲಿ, 22 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ನವಜಾಗರಣದ ಮಹಾನ್ ಸಮಾಜ ಸುಧಾರಕ ರಾಜಾ ರಾಮಮೋಹನ ರಾಯ್ ಅವರ ಜಯಂತಿಯ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಶುಕ್ರವಾರ ಗೌರವ ನಮನ ಸಲ್ಲಿಸಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಸತ್ಯ, ತರ್ಕ, ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವದ ಆಧಾರದ ಮೇಲೆ ಸಮಾಜ ಪರಿವರ್ತನೆಗೆ ರಾಜಾ ರಾಮಮೋಹನ ರಾಯ್ ದಿಕ್ಕು ತೋರಿದರು ಎಂದು ಹೇಳಿದರು. ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಚಿಂತನೆಗಳ ನಡುವೆ ಸಮತೋಲನ ಸಾಧಿಸಿ, ವಿವೇಕಶೀಲ ಹಾಗೂ ಪ್ರಗತಿಪರ ಭಾರತದ ಕನಸನ್ನು ಅವರು ಕಟ್ಟಿಕೊಟ್ಟರು ಎಂದು ಶ್ಲಾಘಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬ್ರಹ್ಮ ಸಮಾಜ ಸ್ಥಾಪನೆಯ ಮೂಲಕ ರಾಜಾ ರಾಮಮೋಹನ ರಾಯ್ ಸಾಮಾಜಿಕ ಕೂರಿತಿಗಳು, ಅಂಧಶ್ರದ್ಧೆ ಮತ್ತು ಭೇದಭಾವಗಳ ವಿರುದ್ಧ ಜನಜಾಗೃತಿ ಮೂಡಿಸಿದರು ಎಂದು ಹೇಳಿದರು. ಶಿಕ್ಷಣ, ಸಾಮಾಜಿಕ ಸುಧಾರಣೆ ಹಾಗೂ ಸಾರ್ವಜನಿಕ ಆಡಳಿತ ಕ್ಷೇತ್ರಗಳಲ್ಲಿ ಅವರ ಕೊಡುಗೆ ಆಧುನಿಕ ಭಾರತದ ಅಡಿಪಾಯವನ್ನು ಬಲಪಡಿಸಿತು ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು, ಶಿಕ್ಷಣದ ವಿಸ್ತರಣೆ ಮತ್ತು ಆಧುನಿಕ ಚಿಂತನೆಗೆ ರಾಜಾ ರಾಮಮೋಹನ ರಾಯ್ ಮಹತ್ವ ನೀಡಿದರು ಎಂದು ಸ್ಮರಿಸಿದರು. ಅವರ ಜೀವನ ಜ್ಞಾನ, ಸುಧಾರಣೆ ಮತ್ತು ಪ್ರಗತಿಪರ ಭಾರತದ ನಿರ್ಮಾಣಕ್ಕೆ ನಿರಂತರ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಸಮಾಜವನ್ನು ಮೂಢನಂಬಿಕೆಗಳಿಂದ ಮುಕ್ತಗೊಳಿಸಿ ಜಾಗೃತ ಸಮಾಜ ನಿರ್ಮಾಣಕ್ಕೆ ರಾಜಾ ರಾಮಮೋಹನ ರಾಯ್ ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದರು. ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಯುಗಯುಗಾಂತರಗಳಿಗೂ ಸ್ಮರಣೀಯವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ನಾಯಕ ನಿತಿನ್ ನವೀನ್ ಅವರು, ಸಮಾಜದಲ್ಲಿನ ಕೂರಿತಿಗಳ ನಿರ್ಮೂಲನೆ, ಮಹಿಳಾ ಹಕ್ಕುಗಳ ರಕ್ಷಣೆ ಹಾಗೂ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ರಾಜಾ ರಾಮಮೋಹನ ರಾಯ್ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು, ಮಹಿಳಾ ಶಿಕ್ಷಣದ ವಿಸ್ತರಣೆ ಮತ್ತು ಸಾಮಾಜಿಕ ಕೂರಿತಿಗಳ ವಿರುದ್ಧ ರಾಜಾ ರಾಮಮೋಹನ ರಾಯ್ ನಡೆಸಿದ ಧೈರ್ಯಶಾಲಿ ಹೋರಾಟ ಭಾರತೀಯ ಸಮಾಜಕ್ಕೆ ಹೊಸ ದಿಕ್ಕು ನೀಡಿದೆ ಎಂದು ತಿಳಿಸಿದ್ದಾರೆ. ಅವರ ಮಾನವೀಯತೆ ಮತ್ತು ಸಮಾನತೆಯ ಸಂದೇಶ ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗುತ್ತಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.