ವೈದ್ಯರ ಚೀಟಿ ಕಡ್ಡಾಯ ; ಪ್ರೆಗಬಲಿನ್ ಔಷಧ ಮಾರಾಟಕ್ಕೆ ಕೇಂದ್ರದ ಹೊಸ ನಿಯಮ
ನವದೆಹಲಿ, 22 ಮೇ (ಹಿ.ಸ.) : ಆ್ಯಂಕರ್ : ನರನೋವು, ಮೃಗಿ, ಆತಂಕ (ಎಂಗ್ಜೈಟಿ) ಸೇರಿದಂತೆ ಹಲವು ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುವ ಪ್ರೆಗಬಲಿನ್ ಔಷಧವನ್ನು ಇನ್ನುಮುಂದೆ ವೈದ್ಯರ ಮಾನ್ಯ ಚೀಟಿ ಇಲ್ಲದೆ ಖರೀದಿಸಲು ಸಾಧ್ಯವಾಗುವುದಿಲ್ಲ. ಔಷಧದ ದುರುಪಯೋಗ ಹಾಗೂ ನಿಯಂತ್ರಣರಹಿತ ಮಾರಾಟಕ್ಕೆ ಕಡಿವಾಣ ಹಾಕುವ
Tablet


ನವದೆಹಲಿ, 22 ಮೇ (ಹಿ.ಸ.) :

ಆ್ಯಂಕರ್ : ನರನೋವು, ಮೃಗಿ, ಆತಂಕ (ಎಂಗ್ಜೈಟಿ) ಸೇರಿದಂತೆ ಹಲವು ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುವ ಪ್ರೆಗಬಲಿನ್ ಔಷಧವನ್ನು ಇನ್ನುಮುಂದೆ ವೈದ್ಯರ ಮಾನ್ಯ ಚೀಟಿ ಇಲ್ಲದೆ ಖರೀದಿಸಲು ಸಾಧ್ಯವಾಗುವುದಿಲ್ಲ. ಔಷಧದ ದುರುಪಯೋಗ ಹಾಗೂ ನಿಯಂತ್ರಣರಹಿತ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.

ಶುಕ್ರವಾರ ಪ್ರಕಟಿಸಿದ ಅಧಿಕೃತ ಪ್ರಕಟಣೆಯಲ್ಲಿ, ಪ್ರೆಗಬಲಿನ್ ಔಷಧವನ್ನು ‘ಶೆಡ್ಯೂಲ್ ಎಚ್-1’ ವ್ಯಾಪ್ತಿಗೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದರಿಂದಾಗಿ ಈ ಔಷಧವನ್ನು ಕೇವಲ ನೋಂದಾಯಿತ ವೈದ್ಯರು ಬರೆದ ಮಾನ್ಯ ಚೀಟಿ ಆಧಾರದ ಮೇಲೆ ಮಾತ್ರ ಮಾರಾಟ ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ಬಳಸುವುದು, ನಶೆ ಉದ್ದೇಶಕ್ಕಾಗಿ ದುರುಪಯೋಗ ಮಾಡುವುದು ಹೆಚ್ಚುತ್ತಿರುವ ಬಗ್ಗೆ ಹಲವು ವರದಿಗಳು ಹೊರಬಿದ್ದಿದ್ದವು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹೊಸ ನಿಯಮದ ಪ್ರಕಾರ, ಮೆಡಿಕಲ್ ಸ್ಟೋರ್ಗಳು ಮತ್ತು ಔಷಧ ಮಾರಾಟಗಾರರು ಔಷಧ ಖರೀದಿಸಿದ ವ್ಯಕ್ತಿಯ ವಿವರ, ವೈದ್ಯರ ಹೆಸರು, ವಿಳಾಸ ಮತ್ತು ನೀಡಲಾದ ಔಷಧದ ಪ್ರಮಾಣ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಪ್ರತ್ಯೇಕ ದಾಖಲೆ ಪುಸ್ತಕದಲ್ಲಿ ದಾಖಲಿಸಬೇಕು. ದಾಖಲೆ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಇದೇ ವೇಳೆ, ಪ್ರೆಗಬಲಿನ್ ಔಷಧದ ಪ್ಯಾಕೆಟ್ಗಳ ಮೇಲೆ ಕೆಂಪು ಬಣ್ಣದಲ್ಲಿ ಸ್ಪಷ್ಟವಾದ “ಎಚ್ಚರಿಕೆ” ಸೂಚನೆ ಮುದ್ರಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande