
ಧಾರ (ಮಧ್ಯಪ್ರದೇಶ), 22 ಮೇ (ಹಿ.ಸ.):
ಆ್ಯಂಕರ್ : ಮಧ್ಯ ಪ್ರದೇಶದ ಧಾರ ಜಿಲ್ಲೆಯ ಐತಿಹಾಸಿಕ ಭೋಜಶಾಲೆಯಲ್ಲಿ ಹಲವು ವರ್ಷಗಳ ಬಳಿಕ ಶುಕ್ರವಾರ ಹಿಂದೂ ಸಮಾಜಕ್ಕೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಸಲ್ಲಿಸುವ ಅವಕಾಶ ದೊರಕಿತು.
ಮಧ್ಯ ಪ್ರದೇಶ ಹೈಕೋರ್ಟ್ ನ ಇಂದೋರ್ ಖಂಡಪೀಠ ಭೋಜಶಾಲೆಯನ್ನು ದೇವಸ್ಥಾನವೆಂದು ಘೋಷಿಸಿದ ತೀರ್ಪಿನ ಬಳಿಕ ಇದೇ ಮೊದಲ ಶುಕ್ರವಾರವಾಗಿದ್ದು, ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಭೋಜಶಾಲೆಗೆ ಭೇಟಿ ನೀಡಿ ವಾಗ್ದೇವಿ ಪೂಜೆ ನೆರವೇರಿಸಿದರು.
ಭೋಜೋತ್ಸವ ಸಮಿತಿಯ ವತಿಯಿಂದ ಭೋಜಶಾಲಾ ಆವರಣದಲ್ಲಿ ವಾಗ್ದೇವಿಯ ವಿಶೇಷ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜೆ ಮತ್ತು ಮಹಾ ಆರತಿ ನಡೆಸಲಾಯಿತು. ಬೆಳಿಗ್ಗೆ 9 ಗಂಟೆಗೆ ನಡೆದ ಮಹಾಆರತಿಯಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದರು. ಮಧ್ಯಾಹ್ನ ಭೋಜಶಾಲಾ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ಕಾರ್ ಸೇವಕರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಭೋಜಶಾಲಾ ಪ್ರಕರಣದ ಅರ್ಜಿದಾರ ಕುಲದೀಪ್ ತಿವಾರಿ ಅವರನ್ನು ಭಕ್ತರು ಸ್ವಾಗತಿಸಿದರು. ಅವರು ಆವರಣದಲ್ಲಿರುವ ಮೆಹರಾಬ್ ಹಾಗೂ ಇಸ್ಲಾಮಿಕ್ ಶಿಲಾಶಾಸನಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. “ಇದೀಗ ವರ್ಷಪೂರ್ತಿ ತಾಯಿ ಸರಸ್ವತಿಯ ಆರಾಧನೆ ಮಾಡಲು ಅವಕಾಶ ದೊರೆತಿರುವುದು ಸಂತಸದ ಸಂಗತಿ” ಎಂದು ಭಕ್ತೆ ಅಮೃತಾ ಸಾವನ್ ಅಭಿಪ್ರಾಯಪಟ್ಟರು.
ಭೋಜೋತ್ಸವ ಸಮಿತಿಯ ಆಶ್ರಯದಾರ ಅಶೋಕ್ ಜೈನ್ ಮಾತನಾಡಿ, “721 ವರ್ಷಗಳ ಹೋರಾಟದ ಬಳಿಕ ಹಿಂದೂ ಸಮಾಜವು ಗೌರವದೊಂದಿಗೆ ಭೋಜಶಾಲೆಯಲ್ಲಿ ತಾಯಿ ಸರಸ್ವತಿಯ ಪೂಜೆ ಮತ್ತು ಮಹಾಆರತಿ ನಡೆಸಿದೆ” ಎಂದು ಹೇಳಿದರು. 1305ರಲ್ಲಿ ಅಲೌದ್ದೀನ್ ಖಿಲ್ಜಿಯ ದಾಳಿಯ ಬಳಿಕ ಈ ಸ್ಥಳದ ಸ್ವರೂಪ ಬದಲಾಗಿದೆ ಎಂದು ಅವರು ಆರೋಪಿಸಿದರು.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಧಾರ ಜಿಲ್ಲೆಯಲ್ಲಿ ಭದ್ರತೆಯನ್ನು ಕಟ್ಟು ನಿಟ್ಟಾಗಿಸಲಾಗಿದೆ. ಭೋಜಶಾಲೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರು ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಡಾವರ್ ಮಾಹಿತಿ ನೀಡಿ, ರ್ಯಾಪಿಡ್ ಆಕ್ಷನ್ ಫೋರ್ಸ್, ಅರೆಸೈನಿಕ ಪಡೆ, ವಿಶೇಷ ಕಾರ್ಯಪಡೆ ಹಾಗೂ ಕುದುರೆಪಡೆ ಸೇರಿ ಎಂಟು ವಿಶೇಷ ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ನಿರಂತರ ನಿಗಾವಹಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂಪಕ್ಷ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ತೀರ್ಪು ಏಕಪಕ್ಷೀಯವಾಗಿದೆ ಎಂದು ಆರೋಪಿಸಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಲಾಗಿದೆ. ಮುಸ್ಲಿಂ ಸಮುದಾಯದ ಮುಖಂಡರು, ಜುಮಾ ನಮಾಜ್ನ್ನು ಮಸೀದಿ ಮತ್ತು ಮನೆಗಳಲ್ಲಿ ಮಾತ್ರ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಅವರು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.