ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆ ರುಕ್ಮಿಣಿ ಅಕ್ಕ ನಿಧನ
ಸಹಕಾರ್ಯವಾಹಕ
ರುಕ್ಮಿಣಿ ಅಕ್ಕ ಸಂಗ್ರಹ ಚಿತ್ರ


ಬೆಂಗಳೂರು, 22 ಮೇ (ಹಿ.ಸ.) :

ಆ್ಯಂಕರ್ : ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತ ಸಹಕಾರ್ಯವಾಹಿಕೆಯಾಗಿದ್ದ ಮಾ. ರುಕ್ಮಿಣಿ ಅಕ್ಕ (98) ಅವರು ಗುರುವಾರ ರಾತ್ರಿ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಯವರೆಗೆ ಅವರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹರಿಶ್ಚಂದ್ರಘಾಟ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗಳು ನೆರವೇರಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ರುಕ್ಮಿಣಿ ಅಕ್ಕ ಅವರ ನಿಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಸಂತಾಪ ಸಂದೇಶದಲ್ಲಿ ಅವರು, “ರಾಷ್ಟ್ರಸೇವಿಕಾ ಸಮಿತಿಯ ಮಾಜಿ ಅಖಿಲ ಭಾರತೀಯ ಸಹಕಾರ್ಯವಾಹಿಕೆಯಾಗಿದ್ದ ರುಕ್ಮಿಣಿ ಅಕ್ಕ ಅವರ ನಿಧನದಿಂದ ಆಘಾತವಾಗಿದೆ. ಅವರು ವಂದನೀಯ ಮೌಸಿಜಿ ಕೇಳ್ಕರ್ ಅವರಿಂದ ಹಿಡಿದು ಇಂದಿನ ನಾಯಕತ್ವದವರೆಗೆ ಸಮಿತಿಯ ಎಲ್ಲ ಪ್ರಮುಖ ನಾಯಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ್ದರು” ಎಂದು ಹೇಳಿದ್ದಾರೆ.

“ಭಾರತೀಯ ಸಂಸ್ಕೃತಿ, ಹಿಂದುತ್ವ ಮತ್ತು ಮಹಿಳಾ ಸಬಲೀಕರಣಕ್ಕೆ ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ್ದ ರುಕ್ಮಿಣಿ ಅಕ್ಕ, ಸಮಿತಿಯೊಳಗೆ ಮಾರ್ಗದರ್ಶಕ ಶಕ್ತಿ ಹಾಗೂ ಪ್ರೇರಣಾದಾಯಕ ವ್ಯಕ್ತಿತ್ವವಾಗಿದ್ದರು. ಮಹಿಳೆಯರ ಬೌದ್ಧಿಕ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅವರು ಅವಿರತ ಶ್ರಮಿಸಿದ್ದಾರೆ” ಎಂದು ಶೋಭಾ ಕರಂದ್ಲಾಜೆ ಸ್ಮರಿಸಿದ್ದಾರೆ.

ರಾಷ್ಟ್ರಸೇವಿಕಾ ಸಮಿತಿಯ ಸಂಘಟನಾತ್ಮಕ ಬಲವರ್ಧನೆಯಲ್ಲಿ ರುಕ್ಮಿಣಿ ಅಕ್ಕ ಅವರ ಕೊಡುಗೆ ಅಪಾರವಾಗಿದ್ದು, ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿ ಮಾಡುವ ದಿಸೆಯಲ್ಲಿ ಅವರು ನಡೆಸಿದ ಕಾರ್ಯಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಅವರು ತಿಳಿಸಿದ್ದಾರೆ.

ದೇಶ ಮತ್ತು ಸಮಾಜ ಸೇವೆಗೆ ಸಮರ್ಪಿತವಾದ ಅವರ ಜೀವನ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande