ರಾಜ್ಯ ಸಭೆಯ 24 ಸ್ಥಾನಗಳಿಗೆ ಚುನಾವಣೆ ಘೋಷಣೆ
ಜೂನ್ 18ರಂದು ಮತದಾನ; ದೇವೇಗೌಡ, ಖರ್ಗೆ ಸೇರಿ ಹಲವು ಸದಸ್ಯರ ಅವಧಿ ಅಂತ್ಯ
EC notification


ನವದೆಹಲಿ, 22 ಮೇ (ಹಿ.ಸ.) :

ಆ್ಯಂಕರ್ : ದೇಶದ 10 ರಾಜ್ಯಗಳಿಗೆ ಸೇರಿದ ರಾಜ್ಯ ಸಭೆಯ 24 ಸ್ಥಾನಗಳಿಗೆ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ ಪ್ರಕಟಿಸಿದೆ. ಜೂನ್-ಜುಲೈ 2026ರಲ್ಲಿ ನಿವೃತ್ತಿಯಾಗಲಿರುವ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಈ ಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಜೂನ್ 1ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಜೂನ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂನ್ 9ರಂದು ಪರಿಶೀಲನೆ ನಡೆಯಲಿದೆ. ಅಭ್ಯರ್ಥಿತ್ವ ಹಿಂಪಡೆಯಲು ಜೂನ್ 11 ಕೊನೆಯ ದಿನವಾಗಿದೆ.

ಜೂನ್ 18ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜೂನ್ 20ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.

ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ನರಾಯಣ ಕೊರಗಪ್ಪ ಹಾಗೂ ಇರಣ್ಣ ಕಡಾಡಿ ಅವರ ಅವಧಿ ಜೂನ್ 25ರಂದು ಅಂತ್ಯಗೊಳ್ಳಲಿದೆ.

ಇದೇ ವೇಳೆ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, ರಾಜಸ್ಥಾನದ ರವನೀತ್ ಸಿಂಗ್ ಸೇರಿದಂತೆ ಹಲವು ಪ್ರಮುಖ ಸದಸ್ಯರ ಅವಧಿಯೂ ಮುಂದಿನ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.

ಚುನಾವಣಾ ಆಯೋಗವು ಮತದಾನದ ವೇಳೆ ರಿಟರ್ನಿಂಗ್ ಅಧಿಕಾರಿ ನೀಡುವ ವಿಶೇಷ ನೇರಳೆ ಬಣ್ಣದ ಪೆನ್ನನ್ನೇ ಬಳಸಬೇಕು ಎಂದು ಸೂಚಿಸಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ವೀಕ್ಷಕರ ನೇಮಕ ಸೇರಿದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande