
ನವದೆಹಲಿ, 21 ಮೇ (ಹಿ.ಸ.) :
ಆ್ಯಂಕರ್ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 35ನೇ ಪುಣ್ಯತಿಥಿ ಅಂಗವಾಗಿ ಗುರುವಾರ ನವದೆಹಲಿಯ ವೀರ ಭೂಮಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕ ಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ನಾಯಕರು ರಾಜೀವ್ ಗಾಂಧಿ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು, ಸಂಸದರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡು ರಾಜೀವ್ ಗಾಂಧಿ ಅವರಿಗೆ ಪುಣ್ಯತಿಥಿ ನಮನ ಸಲ್ಲಿಸಿದರು.
ವೀರ ಭೂಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜೀವ್ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಕೆಲಕಾಲ ಮೌನಾಚರಣೆ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜೀವ್ ಗಾಂಧಿ ಅವರು 21ನೇ ಶತಮಾನದ ಆಧುನಿಕ ಭಾರತದ ಅಡಿಗಲ್ಲು ಹಾಕಿದ ದೂರದೃಷ್ಟಿಯ ನಾಯಕ ಎಂದು ಬಣ್ಣಿಸಿದರು. ಯುವ ಭಾರತದ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದ ಅವರು ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿ ಯುವಜನರಿಗೆ ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ ಅವಕಾಶ ಕಲ್ಪಿಸಿದರು ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಿ ಗ್ರಾಮೀಣ ಮಟ್ಟದಲ್ಲೂ ಪ್ರಜಾಪ್ರಭುತ್ವವನ್ನು ಬಲಪಡಿಸಿದ ರಾಜೀವ್ ಗಾಂಧಿ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಹಾಗೂ ಗಣಕೀಕರಣದ ಮೂಲಕ ಭಾರತವನ್ನು ಹೊಸ ಯುಗದತ್ತ ಕೊಂಡೊಯ್ದರು ಎಂದು ಖರ್ಗೆ ಹೇಳಿದರು.
ರಾಹುಲ್ ಗಾಂಧಿ ತಮ್ಮ ತಂದೆಯೊಂದಿಗಿನ ಹಳೆಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಸಮರ್ಥ, ಸಮೃದ್ಧ ಮತ್ತು ಶಕ್ತಿಶಾಲಿ ಭಾರತದ ನಿಮ್ಮ ಕನಸನ್ನು ನನಸಾಗಿಸುವ ಹೊಣೆಗಾರಿಕೆಯನ್ನು ನಾನು ನಿಭಾಯಿಸುತ್ತೇನೆ” ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ತಂದೆಯ ಮಾರ್ಗದರ್ಶನ, ಸಂಸ್ಕಾರ ಮತ್ತು ನೆನಪುಗಳು ಸದಾ ತಮ್ಮೊಂದಿಗೇ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ರಾಜೀವ್ ಗಾಂಧಿ ತಮ್ಮ ಅಲ್ಪಾವಧಿಯ ಆಡಳಿತದಲ್ಲೇ ಭಾರತದ ಪರಿವರ್ತನೆಗೆ ಭದ್ರ ಅಡಿಪಾಯ ಹಾಕಿದರು ಎಂದರು. ಮಹಿಳೆಯರು, ಯುವಕರು, ಬಡವರು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ರೂಪಿಸಿದ ಅವರ ನೀತಿಗಳ ಪರಿಣಾಮ ಇಂದಿಗೂ ಕಾಣಿಸುತ್ತಿದೆ ಎಂದು ಹೇಳಿದರು.
ಕೇರಳದ ಮುಖ್ಯಮಂತ್ರಿ ವಿಡಿ ಸತೀಶನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು, ಆಧುನಿಕ ಭಾರತದ ನಿರ್ಮಾಣದಲ್ಲಿ ರಾಜೀವ್ ಗಾಂಧಿ ಐತಿಹಾಸಿಕ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿ ದೇಶವನ್ನು 21ನೇ ಶತಮಾನದ ಸವಾಲುಗಳಿಗೆ ಸಜ್ಜುಗೊಳಿಸಿದರು ಎಂದು ಹೇಳಿದ್ದಾರೆ.
1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ರಾಜೀವ್ ಗಾಂಧಿ ಸಾವನ್ನಪ್ಪಿದ್ದರು. 1984ರಿಂದ 1989ರವರೆಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು, ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ರಾಂತಿಯ ಅಡಿಪಾಯ ಹಾಕಿದ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.