ಸೌಂದರ್ಯ ವರ್ಧಕ ಚುಚ್ಚುಮದ್ದು ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ; ಸಿಡಿಎಸ್ಸಿಒ ಎಚ್ಚರಿಕೆ
ನವದೆಹಲಿ, 21 ಮೇ (ಹಿ.ಸ.) : ಆ್ಯಂಕರ್ : ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಸೌಂದರ್ಯ ವರ್ಧಕ ಚುಚ್ಚುಮದ್ದು ಹಾಗೂ ವಯೋನಿರೋಧಕ ಚಿಕಿತ್ಸೆಗಳ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಕುರಿತು ಕಠಿಣ ನಿಲುವು ತಾಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಔಷಧ ಮಾ
ಸಾಂಕೇತಿಕ


ನವದೆಹಲಿ, 21 ಮೇ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಸೌಂದರ್ಯ ವರ್ಧಕ ಚುಚ್ಚುಮದ್ದು ಹಾಗೂ ವಯೋನಿರೋಧಕ ಚಿಕಿತ್ಸೆಗಳ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಕುರಿತು ಕಠಿಣ ನಿಲುವು ತಾಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ ಸಿಡಿಎಸ್ಸಿಒ ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆ ಹೊರಡಿಸಿದೆ.

ಸಂಸ್ಥೆ ನೀಡಿರುವ ಸೂಚನೆಯ ಪ್ರಕಾರ, ಯಾವುದೇ ಸೌಂದರ್ಯವರ್ಧಕ ಉತ್ಪನ್ನವನ್ನು ಇಂಜೆಕ್ಷನ್ ಮೂಲಕ ದೇಹಕ್ಕೆ ನೀಡುವುದು ಕಾನೂನುಬಾಹಿರವಾಗಿದೆ. ಸೌಂದರ್ಯವರ್ಧಕ ಉತ್ಪನ್ನಗಳು ಕೇವಲ ಹೊರಾಂಗಣ ಬಳಕೆಗೆ ಮಾತ್ರ ಅನುಮತಿಸಲ್ಪಟ್ಟಿದ್ದು, ಅವುಗಳನ್ನು ದೇಹದೊಳಗೆ ಇಂಜೆಕ್ಷನ್ ರೂಪದಲ್ಲಿ ಬಳಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಕುರಿತು ಔಷಧ ನಿಯಂತ್ರಣ ಮಹಾನಿರ್ದೇಶಕ ಡಾ. ರಾಜೀವ್ ರಘುವಂಶಿ ಅಧಿಕೃತ ನೋಟಿಸ್ ಹೊರಡಿಸಿದ್ದಾರೆ. ಚರ್ಮದ ಬಣ್ಣ ಬಿಳುಪಾಗಿಸುವುದು, ವಯೋನಿರೋಧಕ ಚಿಕಿತ್ಸೆ ಹಾಗೂ ಗ್ಲೂಟಾಥಿಯೋನ್ ಸೇರಿದಂತೆ ವಿವಿಧ ಬ್ಯೂಟಿ ಇಂಜೆಕ್ಷನ್ಗಳನ್ನು ಸೌಂದರ್ಯವರ್ಧಕ ಉತ್ಪನ್ನಗಳೆಂದು ಮಾರಾಟ ಮಾಡುವುದು ಅಥವಾ ಜಾಹೀರಾತು ನೀಡುವುದು ಅನುಮತಿಸಿಲ್ಲ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ-1940 ಹಾಗೂ ಸೌಂದರ್ಯವರ್ಧಕ ನಿಯಮಗಳು-2020 ಅನ್ವಯ, ಸೌಂದರ್ಯವರ್ಧಕ ಉತ್ಪನ್ನಗಳನ್ನು ಕೇವಲ ಚರ್ಮ, ಕೂದಲು, ನಖಗಳು ಅಥವಾ ದೇಹದ ಹೊರಭಾಗದಲ್ಲಿ ಹಚ್ಚುವುದು, ಸಿಂಪಡಿಸುವುದು ಅಥವಾ ಶುದ್ಧೀಕರಣಕ್ಕಾಗಿ ಮಾತ್ರ ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ.

ವಯೋನಿರೋಧಕ ಚಿಕಿತ್ಸೆಯ ಹೆಸರಿನಲ್ಲಿ ಇಂಜೆಕ್ಷನ್ ಬಳಕೆ ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆರೋಗ್ಯ ಸಚಿವಾಲಯ, ಬ್ಯೂಟಿ ಕ್ಲಿನಿಕ್ಗಳು, ಸೌಂದರ್ಯ ಚಿಕಿತ್ಸಾ ಕೇಂದ್ರಗಳು ಹಾಗೂ ವೈದ್ಯಕೀಯ ವೃತ್ತಿಪರರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande