
ರೋಮ್, 20 ಮೇ (ಹಿ.ಸ.) :
ಆ್ಯಂಕರ್ : ಐದು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಟಲಿಯ ರಾಜಧಾನಿ ರೋಮ್ ಗೆ ಆಗಮಿಸಿದ್ದಾರೆ.
ಬುಧವಾರ ಭಾರತಕ್ಕೆ ಮರಳುವ ಮುನ್ನ ಅವರು ಇಟಲಿ ಅಧ್ಯಕ್ಷ ಸರ್ಜಿಯೋ ಮ್ಯಾಟರೆಲ್ಲಾ ಅವರನ್ನು ಶಿಷ್ಟಾಚಾರ ಭೇಟಿ ಮಾಡುವುದರ ಜೊತೆಗೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾರತ ಹಾಗೂ ಇಟಲಿ ನಡುವಿನ ತಂತ್ರಾತ್ಮಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದ ಈ ಭೇಟಿಯಲ್ಲಿ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (ಐಎಂಇಸಿ) ಪ್ರಮುಖ ಚರ್ಚಾ ವಿಷಯವಾಗಲಿದೆ.
ರೋಮ್ಗೆ ತಲುಪಿದ ಬಳಿಕ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಾಲ್ಕು ಚಿತ್ರಗಳನ್ನು ಹಂಚಿಕೊಂಡು, “ರೋಮ್ಗೆ ಆಗಮಿಸಿದ್ದೇನೆ. ಅಧ್ಯಕ್ಷ ಸರ್ಜಿಯೋ ಮ್ಯಾಟರೆಲ್ಲಾ ಮತ್ತು ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೇನೆ. ಭಾರತ-ಇಟಲಿ ಸಹಕಾರವನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ,” ಎಂದು ತಿಳಿಸಿದ್ದಾರೆ.
ಅದೇ ವೇಳೆ 2025-2029ರ ಸಂಯುಕ್ತ ಕಾರ್ಯತಂತ್ರ ಯೋಜನೆಯ ಪ್ರಗತಿಯನ್ನೂ ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಮುಖ್ಯ ಕಚೇರಿಗೂ ಭೇಟಿ ನೀಡಲಿದ್ದು, ಜಾಗತಿಕ ಆಹಾರ ಭದ್ರತೆ ಮತ್ತು ಬಹುಪಕ್ಷೀಯ ಸಹಕಾರದತ್ತ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ.
ಪ್ರಧಾನಿ ಮೋದಿ ರೋಮ್ಗೆ ಆಗಮಿಸಿದ ಬೆನ್ನಲ್ಲೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಾಮಾಜಿಕ ಜಾಲತಾಣದಲ್ಲಿ “ರೋಮ್ಗೆ ಸ್ವಾಗತ, ನನ್ನ ಸ್ನೇಹಿತ” ಎಂದು ಬರೆದು ಆತ್ಮೀಯ ಸ್ವಾಗತ ಕೋರಿದ್ದಾರೆ.
ಉಲ್ಲೇಖನೀಯವಾಗಿ, ಕಳೆದ ವರ್ಷ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಇಟಲಿಗೆ ಭೇಟಿ ನೀಡಿದ್ದರು. ಅದರ ಬಳಿಕ ಭಾರತ-ಇಟಲಿ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿವೆ.
ಏನು ಈ ಐಎಂಇಸಿ ಯೋಜನೆ?
‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ ಒಂದು ಬಹುಮುಖ ಸಂಪರ್ಕ ಯೋಜನೆಯಾಗಿದ್ದು, ಸಮುದ್ರ, ರೈಲು ಹಾಗೂ ರಸ್ತೆ ಮಾರ್ಗಗಳ ಮೂಲಕ ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ವ್ಯಾಪಾರ ಹಾಗೂ ಆರ್ಥಿಕ ಸಂಪರ್ಕವನ್ನು ಬಲಪಡಿಸುವ ಗುರಿ ಹೊಂದಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯನ್ನು 2023ರ ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಘೋಷಿಸಲಾಗಿತ್ತು.
ಎರಡು ಪ್ರಮುಖ ಮಾರ್ಗಗಳ ಸಂಪರ್ಕ
ಯೋಜನೆಯ ಪೂರ್ವ ಕಾರಿಡಾರ್ ಭಾರತವನ್ನು ಸಮುದ್ರ ಮಾರ್ಗದ ಮೂಲಕ ಯುಎಇ ಹಾಗೂ ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಪರ್ಕಿಸುತ್ತದೆ. ಉತ್ತರ ಕಾರಿಡಾರ್ ಸೌದಿ ಅರೇಬಿಯಾ ಹಾಗೂ ಜೋರ್ಡನ್ ಮೂಲಕ ರೈಲು ಜಾಲದ ಸಹಾಯದಿಂದ ಇಸ್ರೇಲ್ನ ಹೈಫಾ ಬಂದರು ತಲುಪಿ, ಅಲ್ಲಿಂದ ಯುರೋಪಿನ ಬಂದರುಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಈ ಯೋಜನೆಯಲ್ಲಿ ಭಾರತ, ಯುಎಇ, ಸೌದಿ ಅರೇಬಿಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳು ಭಾಗಿಯಾಗಿವೆ.
ವ್ಯಾಪಾರ ಸಮಯ ಕಡಿತ ನಿರೀಕ್ಷೆ
ಈ ಕಾರಿಡಾರ್ ಯೋಜನೆಯಲ್ಲಿ ಸರಕು ಸಾಗಣೆ ಮಾತ್ರವಲ್ಲದೆ, ಹೈ-ಸ್ಪೀಡ್ ಸಬ್ಮರೈನ್ ಕೇಬಲ್ಗಳ ಮೂಲಕ ಡೇಟಾ ಮತ್ತು ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯೂ ಒಳಗೊಂಡಿದೆ. ಇದರ ಮೂಲಕ ಭಾರತ ಮತ್ತು ಯುರೋಪ್ ನಡುವಿನ ವ್ಯಾಪಾರ ಹಾಗೂ ಸರಕು ಸಾಗಣೆ ಸಮಯದಲ್ಲಿ ಗಣನೀಯ ಕಡಿತವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.