
ಬೇರುತ್, 20 ಮೇ (ಹಿ.ಸ.) :
ಆ್ಯಂಕರ್ : ದಕ್ಷಿಣ ಲೆಬನಾನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ತಾಜಾ ವೈಮಾನಿಕ ಹಾಗೂ ಡ್ರೋನ್ ದಾಳಿಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿರುವುದು ಆತಂಕ ಹೆಚ್ಚಿಸಿದೆ. ಇದೇ ವೇಳೆ ದಕ್ಷಿಣ ಲೆಬನಾನ್ ಹಾಗೂ ಬೆಕಾ ಕಣಿವೆಯ 12 ಗ್ರಾಮಗಳನ್ನು ತಕ್ಷಣ ಖಾಲಿ ಮಾಡುವಂತೆ ಇಸ್ರೇಲ್ ಎಚ್ಚರಿಕೆ ನೀಡಿದೆ.
ಏಪ್ರಿಲ್ 16ರಂದು ಲೆಬನಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ವಿರಾಮ ಘೋಷಣೆಯಾಗಿದ್ದರೂ, ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾ ಹಾಗೂ ಇಸ್ರೇಲ್ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ ಸಾವಿನ ಸಂಖ್ಯೆ 19ಕ್ಕೆ ಏರಿರುವ ಶಂಕೆಯೂ ವ್ಯಕ್ತವಾಗಿದೆ.
ಲೆಬನಾನ್ನ ‘ಲೋರಿಯಾಂಟ್ ಟುಡೆ’ ಪತ್ರಿಕೆಯ ವರದಿ ಪ್ರಕಾರ, ದಕ್ಷಿಣ ಭಾಗದ ಪ್ರಮುಖ ಪ್ರದೇಶವಾದ ನಬಾತಿಯೆ ತಾಹ್ತಾ ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳಿಗೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.
ಕಫರ್ ಸಿರ್ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೃತಪಟ್ಟವರನ್ನು ಸಫಿಯಾ ಬದ್ರ್ ಅಲ್-ದೀನ್, ಅಲಿ ನಾಜಿಹ್ ಕಾಮಿಹಾ, ನಾಜಿಹಾ ಕಾಮಿಹಾ ಹಾಗೂ ಅಹ್ಮದ್ ಅಲ್-ಸಬ್ಲಿನಿ ಎಂದು ಗುರುತಿಸಲಾಗಿದೆ.
ದೆಇರ್ ಕನಾನ್ ಅಲ್-ನಹರ್ ಪ್ರದೇಶದಲ್ಲಿ ಟೌನ್ ಹಾಲ್ ಸಮೀಪದ ಮನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಸ್ಥಳೀಯ ನಗರಸಭೆ ಅಧ್ಯಕ್ಷ ಅಲಿ ಕುಸ್ಸೈರ್ ಮಾಹಿತಿ ನೀಡಿದ್ದು, ದಾಳಿಗೊಳಗಾದ ಮನೆ ದೊಡ್ಡ ಕುಟುಂಬದ ವಾಸಸ್ಥಳವಾಗಿತ್ತು ಎಂದು ಹೇಳಿದ್ದಾರೆ. ಅವಶೇಷಗಳಡಿ ಸಿಲುಕಿರುವ ಮೂವರ ಶೋಧ ಕಾರ್ಯ ಮುಂದುವರಿದಿದೆ.
ಇದೇ ವೇಳೆ ನಬಾತಿಯೆ ಪ್ರದೇಶದ ಹರೂಫ್ ಗ್ರಾಮದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಸಿರ್ ನಾಸರ್ ಮೃತಪಟ್ಟಿದ್ದಾರೆ. ಫ್ರೌನ್ ಪ್ರದೇಶದ ಮೇಲಿನ ಮತ್ತೊಂದು ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಡ್ರೋನ್ ದಾಳಿಗೆ ಗುರಿಯಾದ ಮೋಟಾರ್ ಸೈಕಲ್ ಸವಾರನೂ ಪ್ರಾಣ ಕಳೆದುಕೊಂಡಿದ್ದಾನೆ.
ನಬಾತಿಯೆ ಪ್ರದೇಶದ ಮತ್ತೊಂದು ದಾಳಿಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಹಸ್ಬಯ್ಯಾ ಜಿಲ್ಲೆಯ ಕಫರ್ ಹಮ್ಮಾಮ್ ಮತ್ತು ಕಫರ್ ಶುಬಾ ಪ್ರದೇಶಗಳ ಹೊರವಲಯದಿಂದ ಇಸ್ರೇಲಿ ಸೈನಿಕರು ಏಳು ಮಂದಿಯನ್ನು ಬಂಧಿಸಿದ್ದಾರೆ ಎಂದು ಲೆಬನಾನ್ ನಾಗರಿಕ ರಕ್ಷಣಾ ಪಡೆ ತಿಳಿಸಿದೆ. ಬಂಧಿತರಲ್ಲಿ ನಾಲ್ವರು ಸಿರಿಯನ್ ಕಾರ್ಮಿಕರಾಗಿದ್ದು, ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಮೂವರು ನಾಗರಿಕರು ಇಸ್ರೇಲ್ ವಶದಲ್ಲಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.