
ನವದೆಹಲಿ, 13 ಮೇ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ದೊಡ್ಡ ಬೆಕ್ಕುಗಳ ಸಂರಕ್ಷಣೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಐದು ವಿಷಯಾಧಾರಿತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, 2026ರ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಶೃಂಗಸಭೆಗೆ ಮುನ್ನ ದೇಶದ ವಿವಿಧ ರಾಜ್ಯಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದೆ.
ಹುಲಿ, ಏಷ್ಯನ್ ಸಿಂಹ, ಚಿರತೆ, ಹಿಮ ಚಿರತೆ ಹಾಗೂ ಚೀತಾ ಸಂರಕ್ಷಣೆಗೆ ಸಂಬಂಧಿಸಿದ ಸಾಧನೆಗಳು, ಸವಾಲುಗಳು ಮತ್ತು ಮುಂದಿನ ಕಾರ್ಯತಂತ್ರಗಳನ್ನು ಈ ಕಾರ್ಯಕ್ರಮಗಳ ಮೂಲಕ ಜನರಿಗೆ ಪರಿಚಯಿಸಲಾಗುತ್ತದೆ.
ಗುಜರಾತಿನ ಗಿರ್ನಲ್ಲಿ ಏಷ್ಯನ್ ಸಿಂಹ ಸಂರಕ್ಷಣಾ ಕಾರ್ಯಕ್ರಮ ನಡೆಯಲಿದ್ದು, ಪ್ರಾಜೆಕ್ಟ್ ಸಿಂಹ, ವೈಜ್ಞಾನಿಕ ಮೇಲ್ವಿಚಾರಣಾ ವ್ಯವಸ್ಥೆ, ಆವಾಸಸ್ಥಾನ ಅಭಿವೃದ್ಧಿ ಹಾಗೂ ಮಾಲ್ಧಾರಿ ಸಮುದಾಯದ ಪಾತ್ರವನ್ನು ಪ್ರಮುಖವಾಗಿ ಪರಿಚಯಿಸಲಾಗುತ್ತದೆ.
ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆಯುವ ಹುಲಿ ಸಂರಕ್ಷಣಾ ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ಟೈಗರ್, ವನ್ಯಜೀವಿ ಕಾರಿಡಾರ್ಗಳ ರಕ್ಷಣೆ, ಕೃತಕ ಬುದ್ಧಿಮತ್ತೆ ಆಧಾರಿತ ಕಣ್ಗಾವಲು ವ್ಯವಸ್ಥೆ ಹಾಗೂ ಮಾನವ-ಹುಲಿ ಸಂಘರ್ಷ ಕಡಿಮೆ ಮಾಡುವ ಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ.
ಒಡಿಶಾದ ಭುವನೇಶ್ವರದಲ್ಲಿ ಚಿರತೆ ಸಂರಕ್ಷಣೆ ಮತ್ತು ಜೀವವೈವಿಧ್ಯತೆಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ಕಡಿಮೆ ಮಾಡುವುದು, ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು ಹಾಗೂ ಸಹಬಾಳ್ವೆ ಉತ್ತೇಜಿಸುವ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.
ಸಿಕ್ಕಿಂನ ಗ್ಯಾಂಗ್ಟಾಕ್ನಲ್ಲಿ ಹಿಮ ಚಿರತೆ ಸಂರಕ್ಷಣಾ ಕಾರ್ಯಕ್ರಮ ನಡೆಯಲಿದ್ದು, ಹಿಮಾಲಯ ಪರಿಸರ ವ್ಯವಸ್ಥೆಯ ರಕ್ಷಣೆ, ಹವಾಮಾನ ಬದಲಾವಣೆಯ ಸವಾಲುಗಳು ಹಾಗೂ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ ಕುರಿತು ವಿಶೇಷ ಒತ್ತು ನೀಡಲಾಗುತ್ತದೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆಯುವ ಚೀತಾ ಸಂರಕ್ಷಣಾ ಕಾರ್ಯಕ್ರಮದಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾಗಿರುವ ಚೀತಾಗಳ ಪುನರ್ವಸತಿ, ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಅಭಿವೃದ್ಧಿ ಹಾಗೂ ವೈಜ್ಞಾನಿಕ ಮೇಲ್ವಿಚಾರಣಾ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಕೇಂದ್ರ ಸರ್ಕಾರದ ಪ್ರಕಾರ, ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕಿನ ಪ್ರಭೇದಗಳ ಸಂರಕ್ಷಣೆಗೆ ಜಾಗತಿಕ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಭಾರತ ಆರಂಭಿಸಿದ ಮಹತ್ವದ ವೇದಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.