
ಗುವಾಹಟಿ, 12 ಮೇ (ಹಿ.ಸ.) :
ಆ್ಯಂಕರ್ : ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಸತತ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಗುವಾಹಟಿಯ ಖಾನಪಾರ ಪ್ರದೇಶದಲ್ಲಿರುವ ಪಶುವೈದ್ಯಕೀಯ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಶರ್ಮಾ ಅವರಿಗೆ ಪ್ರಮಾಣವಚನ ಬೋಧಿಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್, ಪವಿತ್ರಾ ಮಾರ್ಗರಿಟಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಬಿಜೆಪಿ ಆಡಳಿತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಸ್ಸಾಂನಲ್ಲಿ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಸತತ ಮೂರನೇ ಬಾರಿಗೆ ಸರ್ಕಾರ ರಚನೆ ಮಾಡಿದ್ದು, ಈ ಮೂಲಕ ಮತ್ತೆ ಅಧಿಕಾರ ಉಳಿಸಿಕೊಂಡಿದೆ.
ಈ ಸಂದರ್ಭದಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರ ತಾಯಿ ಮೃಣಾಲಿನಿ ದೇವಿ, ಪತ್ನಿ ರಿನಿಕಿ ಭೂಯಾನ್ ಶರ್ಮಾ, ಪುತ್ರ ನಂದಿಲ್ ಬಿಸ್ವಾ ಶರ್ಮಾ ಹಾಗೂ ಪುತ್ರಿ ಸುಕನ್ಯಾ ಶರ್ಮಾ ಸಮಾರಂಭಕ್ಕೆ ಸಾಕ್ಷಿಯಾದರು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಎನ್ಡಿಎ ಮೈತ್ರಿಕೂಟ ದಾಖಲೆಯ 102 ಶಾಸಕರ ಬೆಂಬಲ ಹೊಂದಿದೆ. ಇದರಲ್ಲಿ ಬಿಜೆಪಿ 82 ಸ್ಥಾನಗಳನ್ನು ಗೆದ್ದುಕೊಂಡಿದೆ.
ಬಿಜೆಪಿಯ ಮೈತ್ರಿ ಪಕ್ಷಗಳಾದ ಅಸ್ಸಾಂ ಗಣ ಪರಿಷತ್ (ಎಜಿಪಿ) ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ತಲಾ 10 ಸ್ಥಾನಗಳನ್ನು ಪಡೆದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa