
ನವದೆಹಲಿ, 12 ಮೇ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು 15 ಮಂದಿ ಶುಶ್ರೂಷಾ ಸಿಬ್ಬಂದಿಗೆ ಪ್ರದಾನಿಸಿದರು.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾ ಸಿಬ್ಬಂದಿಯನ್ನು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಸೇವೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಶುಶ್ರೂಷಾ ಸಿಬ್ಬಂದಿ ಸಹಾನುಭೂತಿ, ಸೇವಾಭಾವ ಮತ್ತು ಸಮರ್ಪಣೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿಯೂ ರೋಗಿಗಳ ಆರೈಕೆಯಲ್ಲಿ ಅವರು ತೋರಿಸುವ ಬದ್ಧತೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
“ಶುಶ್ರೂಷಾ ಸಿಬ್ಬಂದಿ ಮತ್ತು ಆರೋಗ್ಯ ವೃತ್ತಿಪರರ ಅಮೂಲ್ಯ ಸೇವೆಗೆ ಈ ಪ್ರಶಸ್ತಿ ಗೌರವದ ಸಂಕೇತವಾಗಿದೆ,” ಎಂದು ರಾಷ್ಟ್ರಪತಿಗಳು ಹೇಳಿದರು. ಪ್ರಶಸ್ತಿ ಪುರಸ್ಕೃತರ ಕರ್ತವ್ಯನಿಷ್ಠೆ, ಸೇವಾಭಾವ ಮತ್ತು ರೋಗಿಗಳ ಆರೈಕೆಯಲ್ಲಿ ತೋರಿದ ಶ್ರೇಷ್ಠತೆಯನ್ನು ಅವರು ಮೆಚ್ಚಿದರು.
ಶುಶ್ರೂಷಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವವರನ್ನು ಗೌರವಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1973ರಲ್ಲಿ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಆರಂಭಿಸಿತ್ತು. ಇದು ದೇಶದ ಶುಶ್ರೂಷಾ ವೃತ್ತಿಯ ಅತ್ಯುನ್ನತ ರಾಷ್ಟ್ರೀಯ ಗೌರವವೆಂದು ಪರಿಗಣಿಸಲಾಗಿದೆ.
ಎಎನ್ಎಂ ವಿಭಾಗದ ಪ್ರಶಸ್ತಿ ಪುರಸ್ಕೃತರು
ಕುಲ್ವಿಂದರ್ ಪಾರಿಖ್ – ಲಡಾಖ್
ಉಜ್ಜ್ವಲಾ ಮಹಾದೇವ್ ಸೋಯಮ್ – ಮಹಾರಾಷ್ಟ್ರ
ಲಲೆಂತಂಗಿ ನಾಮ್ಟೆ – ಮಿಜೋರಾಂ
ಮಧು ಮಾಲಾ ಗುರುಂಗ್ – ಸಿಕ್ಕಿಂ
ಪೂಜಾ ಪರ್ಮಾರ್ ರಾಣಾ – ಉತ್ತರಾಖಂಡ
ಗೀತಾ ಕರ್ಮಾಕರ್ – ಪಶ್ಚಿಮ ಬಂಗಾಳ
ನರ್ಸ್ ವಿಭಾಗದ ಪ್ರಶಸ್ತಿ ಪುರಸ್ಕೃತರು
ಪೂನಂ ವರ್ಮಾ – ಚಂಡೀಗಢ
ದೀಪಾ ಬಿಜು – ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್-ದಿಯು
ಡಾ. ಶ್ರವಣ್ ಕುಮಾರ್ ಢಾಕಾ – ದೆಹಲಿ
ರಕ್ಷಾ ರೂಪೋ ಪರ್ವತ್ಕರ್ – ಗೋವಾ
ಕವಿತಾ ಜಗನ್ನಾಥ್ – ಕರ್ನಾಟಕ
ಮಂಜು ಮೋಲ್ ವಿ. ಎಸ್. – ಕೇರಳ
ಆಯೆಷಾ ಬೀಬಿ ಕೆ – ಲಕ್ಷದ್ವೀಪ
ಆರ್. ಶಂಕರ್ ಷಣ್ಮುಗಂ – ತಮಿಳುನಾಡು
ಮೇಜರ್ ಜನರಲ್ ಲಿಸ್ಸಮ್ಮ ಪಿ. ವಿ. – ಸೇನಾ ಪ್ರಧಾನ ಕಚೇರಿ, ರಕ್ಷಣಾ ಸಚಿವಾಲಯ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa