
ಭಾವನಗರ, 11 ಮೇ (ಹಿ.ಸ.) :
ಆ್ಯಂಕರ್ : ಗುಜರಾತಿನ ಭಾವನಗರ ಮೂಲದ ಸಿಂಧಿ ಸಮುದಾಯದ ಕುಟುಂಬವೊಂದು ಹಿಮಾಚಲ ಪ್ರದೇಶ ಪ್ರವಾಸದ ವೇಳೆ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದೆ. ಮನಾಲಿ ಸಮೀಪ ಕಾರೊಂದು ಆಳವಾದ ಕಣಿವೆಗೆ ಉರುಳಿಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಒಂದೇ ಕುಟುಂಬ ಸದಸ್ಯರು ಎಂದು ತಿಳಿದು ಬಂದಿದ್ದು, ಈ ದುರ್ಘಟನೆ ಭಾವನಗರದ ಸಿಂಧಿ ಸಮುದಾಯದಲ್ಲಿ ಶೋಕದ ಛಾಯೆ ಮೂಡಿಸಿದೆ.
ಮಾಹಿತಿಯ ಪ್ರಕಾರ, ಲಲಿತ್ ಭಾಯ್ ಫತ್ನಾನಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಿಮಾಚಲ ಪ್ರದೇಶ ಪ್ರವಾಸಕ್ಕೆ ತೆರಳಿದ್ದರು. ಸೋಮವಾರ ಮುಂಜಾನೆ ಸುಮಾರು 3.30 ರಿಂದ 4 ಗಂಟೆಯ ವೇಳೆಗೆ ಮನಾಲಿಯಿಂದ ಬೇಲಾ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಕಾಂಗ್ರಾ ಜಿಲ್ಲೆಯ ಚಾಬಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-28ರಲ್ಲಿ ವಾಹನದ ನಿಯಂತ್ರಣ ತಪ್ಪಿದೆ. ಬಳಿಕ ಕಾರು ನೇರವಾಗಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ.
ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿ ಮಕ್ಕಳು ಸೇರಿದಂತೆ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ತುರ್ತು ಪರಿಹಾರ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದರು.
ಅಪಘಾತದಲ್ಲಿ ಮೃತಪಟ್ಟವರನ್ನು ಲಲಿತ್ ಭಾಯ್ ಫತ್ನಾನಿ, ಸೋನಿಯಾಬೆನ್ ಫತ್ನಾನಿ, ಪ್ರಿಯಾಂಕ್ ಭಾಯ್ ಭೋಪಾನಿ, ಕಾಜಲ್ ಬೆನ್ ಭೋಪಾನಿ, ದಿವ್ಯಾಂಶು ಭೋಪಾನಿ ಹಾಗೂ ಚಾಲಕ ಯಶ್ವಂತ್ ಕುಮಾರ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಮಯಾಂಕ್ ಭಾಯ್ ಫತ್ನಾನಿ, ಫೋರ್ಮನ್ ಫತ್ನಾನಿ, ಜಿಯಾನ್ಶ್ ಫತ್ನಾನಿ ಹಾಗೂ ಪ್ರಿಯಾಂಶಿ ಭೋಪಾನಿ ಸೇರಿದ್ದಾರೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಿಂಧು ಸೇನೆಯ ರಾಜ್ಯಾಧ್ಯಕ್ಷ ಕಮಲೇಶ್ ಚಂದಾನಿ ಅವರು ಹಿಮಾಚಲ ಪ್ರದೇಶ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
“ಅಪಘಾತದ ಮಾಹಿತಿ ಮುಂಜಾನೆ ದೊರಕುತ್ತಿದ್ದಂತೆಯೇ ಹಿಮಾಚಲ ಪ್ರದೇಶದ ಆಡಳಿತ ಹಾಗೂ ವಿಪತ್ತು ನಿರ್ವಹಣಾ ತಂಡವನ್ನು ಸಂಪರ್ಕಿಸಿದ್ದೇವೆ. ಪರಿಹಾರ ಮತ್ತು ಚಿಕಿತ್ಸಾ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ,” ಎಂದು ಕಮಲೇಶ್ ಚಂದಾನಿ ಹೇಳಿದ್ದಾರೆ.
ಪ್ರವಾಸಕ್ಕೆ ತೆರಳಿದ್ದ ಫತ್ನಾನಿ ಮತ್ತು ಭೋಪಾನಿ ಕುಟುಂಬಗಳ ಒಟ್ಟು 9 ಸದಸ್ಯರಲ್ಲಿ 5 ಮಂದಿ ಹಾಗೂ ಚಾಲಕ ಸೇರಿ 6 ಮಂದಿ ಮೃತಪಟ್ಟಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa