
ಗಿರ್ ಸೋಮನಾಥ್, 11 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಸೋಮನಾಥ ಮಹಾದೇವ ದೇವಾಲಯದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಆಯೋಜಿಸಲಾದ “ಸೋಮನಾಥ ಅಮೃತ ಪರ್ವ-2026” ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲ ಜ್ಯೋತಿರ್ಲಿಂಗವಾದ ಭಗವಾನ್ ಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಭಾರತೀಯ ಸಂಸ್ಕೃತಿ, ನಂಬಿಕೆ ಮತ್ತು ಆತ್ಮಗೌರವದ ಪ್ರತೀಕವಾಗಿರುವ ಸೋಮನಾಥ ಮಹಾದೇವ ದೇವಾಲಯದಲ್ಲಿ ಸೋಮವಾರ ಭಕ್ತಿ ಸಂಭ್ರಮ ಮನೆಮಾಡಿತ್ತು. ದೇವಾಲಯದ ಆವರಣವು ಶಂಖನಾದ, ಡಮರು ಧ್ವನಿ ಹಾಗೂ “ಹರ ಹರ ಮಹಾದೇವ” ಘೋಷಣೆಗಳಿಂದ ಮೊಳಗಿತು.
ದೇವಾಲಯದ ಮುಖ್ಯ ದ್ವಾರಕ್ಕೆ ಆಗಮಿಸಿದ ಪ್ರಧಾನಿಗೆ ಭವ್ಯ ಸ್ವಾಗತ ಕೋರಲಾಯಿತು. ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನಗಳ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಸೋಮನಾಥ ವಿಷಯಾಧಾರಿತವಾಗಿ ನಿರ್ಮಿಸಲಾದ ಆಕರ್ಷಕ ಮರಳು ಶಿಲ್ಪವನ್ನು ಪ್ರಧಾನಿ ವೀಕ್ಷಿಸಿದರು.
ಸಾಂಪ್ರದಾಯಿಕ ಉಡುಪಿನಲ್ಲಿ ಅಲಂಕೃತಗೊಂಡ ಸುಮಾರು 100 ಬಾಲಕಿಯರು ಮತ್ತು ಬಾಲಕರು ತಲೆಯ ಮೇಲೆ ಅಮೃತ ಕಲಶ ಹೊತ್ತು ಪ್ರಧಾನಿ ಅವರನ್ನು ಸ್ವಾಗತಿಸಿದರು. 75 ಡೊಳ್ಳು ವಾದಕರ ನಾದ ಮತ್ತು ತುತ್ತೂರಿ ಘೋಷಣೆಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ದೇವಾಲಯ ಪ್ರವೇಶಕ್ಕೂ ಮುನ್ನ ಪ್ರಧಾನಿ ಅವರು ಅಖಂಡ ಭಾರತದ ಶಿಲ್ಪಿ ಹಾಗೂ ಸೋಮನಾಥ ದೇವಾಲಯ ಪುನರ್ನಿರ್ಮಾಣದ ಪ್ರಮುಖ ದಾರಿದೀಪರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ನಂತರ ಋಷಿಕುಮಾರರ ವೇದಘೋಷ, ಶಂಖನಾದ ಹಾಗೂ ಮಂಗಳ ವಾದ್ಯಗಳ ನಡುವೆ ವಿಶೇಷ ಮಾರ್ಗದ ಮೂಲಕ ಗರ್ಭಗುಡಿಗೆ ತೆರಳಿದ ಪ್ರಧಾನಿ, ವೈದಿಕ ಮಂತ್ರೋಚ್ಚಾರಗಳ ನಡುವೆ ಸೋಮನಾಥ ಮಹಾದೇವರಿಗೆ ಮಹಾಪೂಜೆ ನೆರವೇರಿಸಿದರು. ದೇಶದ ಅಭಿವೃದ್ಧಿ, ಜನರ ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಅವರು ಕುಂಭಾಭಿಷೇಕ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡಿದರು. ಇದೇ ವೇಳೆ ಭಾರತೀಯ ವಾಯುಪಡೆಯ ಎರಡು ಚೇತಕ್ ಹೆಲಿಕಾಪ್ಟರ್ಗಳು ದೇವಾಲಯದ ಶಿಖರದ ಮೇಲೆ ಪುಷ್ಪವೃಷ್ಠಿ ನಡೆಸಿದವು. ಇದರಿಂದ ಇಡೀ ದೇವಾಲಯ ಪರಿಸರ ಮತ್ತು ಕಡಲ ತೀರ ಭಕ್ತಿಭಾವದಿಂದ ಮೆರೆಯಿತು.
ಭಾರತೀಯ ವಾಯುಪಡೆಯ “ಸೂರ್ಯಕಿರಣ” ವೈಮಾನಿಕ ಪ್ರದರ್ಶನ ತಂಡ ಆಕಾಶದಲ್ಲಿ ರೋಚಕ ಪ್ರದರ್ಶನ ನೀಡಿದ್ದು, ನೆರೆದಿದ್ದ ಭಕ್ತರನ್ನು ಮನಮೋಹಗೊಳಿಸಿತು.
ಪ್ರಧಾನಿ ಅವರು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸೋಮನಾಥದ ಐತಿಹಾಸಿಕ ಪರಂಪರೆ ಮತ್ತು ವೈಭವವನ್ನು ಬಿಂಬಿಸುವ ವಿಶೇಷ ಪ್ರದರ್ಶನಕ್ಕೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ, ಹಲವು ಸಂತರು, ಮಹಂತರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa