
ನವದೆಹಲಿ, 11 ಮೇ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ, ಬೆಲೆ ಏರಿಕೆ ಹಾಗೂ ಆರ್ಥಿಕ ಒತ್ತಡದ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಖರ್ಗೆ, “ಬಡತನವು ಗಾಯಕ್ಕೆ ಅವಮಾನವನ್ನು ಸೇರಿಸುತ್ತಿದೆ. ಮೋದಿ ಜೀ ದೇಶಕ್ಕೆ ಈಗ ಉಳಿತಾಯದ ಪಾಠವನ್ನು ಕಲಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರ ಕಾಂಗ್ರೆಸ್ ಪಕ್ಷವು ಆರ್ಥಿಕತೆ ಮೇಲೆ ಅದರ ಪರಿಣಾಮಗಳ ಕುರಿತು ನಿರಂತರವಾಗಿ ಎಚ್ಚರಿಕೆ ನೀಡಿತ್ತು ಎಂದು ಅವರು ಹೇಳಿದ್ದಾರೆ.
ರೂಪಾಯಿ ಮೌಲ್ಯದ ಕುಸಿತ, ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಏರಿಕೆ, ರಸಗೊಬ್ಬರ ಕೊರತೆ, ಆಹಾರ ಭದ್ರತೆಗೆ ಉಂಟಾಗಿರುವ ಸವಾಲು, ಔಷಧಿಗಳ ಬೆಲೆ ಹೆಚ್ಚಳ ಹಾಗೂ ಎಂಎಸ್ಎಂಇ ಕ್ಷೇತ್ರದ ಬಿಕ್ಕಟ್ಟು ಸೇರಿದಂತೆ ಹಲವು ಸಮಸ್ಯೆಗಳನ್ನು ಕಾಂಗ್ರೆಸ್ ಪ್ರಸ್ತಾಪಿಸಿತ್ತು ಎಂದು ತಿಳಿಸಿದ್ದಾರೆ.
“ಆದರೆ ಪ್ರಧಾನಿ ಚುನಾವಣಾ ಪ್ರಚಾರ ಮತ್ತು ರೋಡ್ ಶೋಗಳಲ್ಲಿ ನಿರತರಾಗಿದ್ದರು. ‘ಪರಿಸ್ಥಿತಿ ನಿಯಂತ್ರಣದಲ್ಲಿದೆ’, ‘ಎಲ್ಲವೂ ಚೆನ್ನಾಗಿದೆ’ ಎಂದು ಹೇಳುತ್ತಿದ್ದರು” ಎಂದು ಖರ್ಗೆ ಆರೋಪಿಸಿದ್ದಾರೆ.
ಚುನಾವಣೆಗಳು ಮುಗಿದ ಬಳಿಕ ಜನರಿಗೆ “ಇದನ್ನು ಖರೀದಿಸಬೇಡಿ, ಅದನ್ನು ಉಳಿಸಿ, ಮನೆಯಿಂದಲೇ ಕೆಲಸ ಮಾಡಿ” ಎಂಬ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ ಅವರು, “12 ವರ್ಷಗಳ ವೈಫಲ್ಯಕ್ಕೆ ಕಾರಣ ಹೇಳಿ, ಅದರ ಭಾರವನ್ನು ಜನರ ಮೇಲೆ ಹಾಕಬೇಡಿ” ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಗೋಸ್ವಾಮಿ ತುಳಸಿದಾಸರ ಮಾತು ಉಲ್ಲೇಖಿಸಿದ ಖರ್ಗೆ, “ನಿಜವಾಗಿ ನಡೆದುಕೊಳ್ಳುವುದಕ್ಕಿಂತ ಉಪದೇಶಿಸುವುದು ಸುಲಭ” ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa