
ನವದೆಹಲಿ, 11 ಮೇ (ಹಿ.ಸ.) :
ಆ್ಯಂಕರ್ : ಗುಜರಾತ್ ನ ಗಿರ್ ಸೋಮನಾಥ ಜಿಲ್ಲೆಯ ಪ್ರಭಾಸ ಪಟಣದಲ್ಲಿ ಇರುವ ಸೋಮನಾಥ ದೇವಾಲಯ ಇಂದು ಐತಿಹಾಸಿಕ ಧಾರ್ಮಿಕ ಮಹೋತ್ಸವಕ್ಕೆ ಸಾಕ್ಷಿಯಾಗಲಿದೆ. ಭಗವಾನ್ ಶಿವನ ೧೨ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿ ಪರಿಗಣಿಸಲಾಗುವ ಈ ಪವಿತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಕುಂಭಾಭಿಷೇಕ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ೧೦.೧೫ರ ಸುಮಾರಿಗೆ ಭಾಗವಹಿಸಲಿದ್ದಾರೆ.
ಮೊದಲ ಬಾರಿಗೆ ದೇವಾಲಯದ ಭವ್ಯ ಶಿಖರದ ಮೇಲೆ ವಿಶೇಷ ಕಲಶದ ಮೂಲಕ ದೇಶದ ೧೧ ಪವಿತ್ರ ದೇವಾಲಯಗಳ ತೀರ್ಥಜಲದಿಂದ ಕುಂಭಾಭಿಷೇಕ ನೆರವೇರಿಸಲಾಗುತ್ತಿದೆ. ಇದರೊಂದಿಗೆ ಸೋಮನಾಥ ದೇವಾಲಯದ ವೈಭವಮಯ ಇತಿಹಾಸಕ್ಕೆ ಮತ್ತೊಂದು ಸುವರ್ಣ ಅಧ್ಯಾಯ ಸೇರ್ಪಡೆಯಾಗುತ್ತಿದೆ.
ಅಮೃತ ಮಹೋತ್ಸವದ ಅಂಗವಾಗಿ ಸುಮಾರು ಎಂಟು ಅಡಿ ಎತ್ತರದ ಬೃಹತ್ ಕಲಶವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಒಟ್ಟು ೧೮೬೦ ಕೆಜಿ ತೂಕದ ಈ ರಚನೆಯಲ್ಲಿ ಕಲಶವೇ ೭೬೦ ಕೆಜಿ ತೂಕ ಹೊಂದಿದ್ದು, ೧೧೦೦ ಲೀಟರ್ ತೀರ್ಥಜಲವನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಈ ಭವ್ಯ ಕಲಶವು ಆಧುನಿಕ ತಾಂತ್ರಿಕ ನೈಪುಣ್ಯದ ಪ್ರತೀಕವಾಗಿಯೂ ಗಮನ ಸೆಳೆಯುತ್ತಿದೆ.
ಪ್ರಧಾನಿ ಮೋದಿ ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಸೋಮನಾಥಕ್ಕೆ ಆಗಮಿಸಿದ್ದು, ದೇವಾಲಯವನ್ನು ಸುಂದರ ಹೂವಿನ ಅಲಂಕಾರಗಳಿಂದ ಸಿಂಗರಿಸಲಾಗಿದೆ.
ನವೀಕರಿಸಿದ ಸೋಮನಾಥ ದೇವಾಲಯ ಉದ್ಘಾಟನೆಯ ೭೫ನೇ ವರ್ಷದ ಸ್ಮರಣಾರ್ಥ “ಸೋಮನಾಥ ಅಮೃತ ಮಹೋತ್ಸವ” ಆಚರಿಸಲಾಗುತ್ತಿದೆ. ವಿಶೇಷ ಮಹಾಪೂಜೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ಬಳಿಕ ಕುಂಭಾಭಿಷೇಕ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಸೋಮನಾಥದ ಆಧ್ಯಾತ್ಮಿಕ ಪರಂಪರೆ ಮತ್ತು ಐತಿಹಾಸಿಕ ಮಹತ್ವವನ್ನು ಪ್ರತಿಬಿಂಬಿಸುವ ಸ್ಮಾರಕ ಅಂಚೆ ಚೀಟಿಗಳು ಹಾಗೂ ವಿಶೇಷ ನಾಣ್ಯಗಳನ್ನು ಪ್ರಧಾನಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ೯೦ ಮೀಟರ್ ಎತ್ತರದ ಬೃಹತ್ ಕ್ರೇನ್ ನೆರವಿನಿಂದ ಕಲಶವನ್ನು ದೇವಾಲಯದ ಶಿಖರದವರೆಗೆ ಎಚ್ಚರಿಕೆಯಿಂದ ಸಾಗಿಸಲಾಗುತ್ತದೆ. ಅತ್ಯಾಧುನಿಕ ದೂರ ನಿಯಂತ್ರಣ ಹಾಗೂ ಸಂವೇದಕ ವ್ಯವಸ್ಥೆಗಳ ಸಹಾಯದಿಂದ ಕೇವಲ ಮೂರು ನಿಮಿಷಗಳಲ್ಲಿ ಶಿಖರದ ಮೇಲೆ ತೀರ್ಥಜಲ ಪ್ರತಿಷ್ಠಾಪನೆ ನೆರವೇರಲಿದೆ. ವೈದಿಕ ಮಂತ್ರೋಚ್ಚಾರ, ಶಂಖನಾದ ಹಾಗೂ ಘಂಟಾನಾದಗಳ ನಡುವೆ ನಡೆಯಲಿರುವ ಈ ಮಹೋತ್ಸವ ಭಕ್ತರಲ್ಲಿ ಭಕ್ತಿಭಾವವನ್ನು ಉಕ್ಕೇರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa