
ಬೆಂಗಳೂರು, 11 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ಮಾಡಿದ ಭಾಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,
ಪ್ರಧಾನ ಮಂತ್ರಿಯವರು ದೇಶದ ಪ್ರಧಾನಿಯಾಗಿಯೋ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೋ ಅಥವಾ ರಾಜ್ಯದ ಪ್ರತಿ ಪಕ್ಷದ ನಾಯಕರಾಗಿಯೋ ಮಾತನಾಡಿದರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದರೂ, ಅವರ ಮಾತುಗಳಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ತಮ್ಮ ಪಕ್ಷದ ದುರ್ಬಲ ಸ್ಥಿತಿಯ ಅಸಹಾಯಕತೆ ಸ್ಪಷ್ಟವಾಗಿ ಕಾಣಿಸಿತು ಎಂದು ಅವರು ಆರೋಪಿಸಿದ್ದಾರೆ. “ತಮ್ಮ ಊಟದ ತಟ್ಟಯಲ್ಲಿ ಆನೆ ಸತ್ತು ಬಿದ್ದಿದ್ದರೂ, ಎದುರಿನವರ ತಟ್ಟೆ ಮೇಲೆ ಸತ್ತ ನೊಣವನ್ನು ಹುಡುಕುವ ಢೋಂಗಿ ಮನೋಭಾವ ಅವರ ಮಾತುಗಳಲ್ಲಿ ಕಂಡುಬಂತು” ಎಂದು ಟೀಕಿಸಿದ್ದಾರೆ.
ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಿಂದಿನ ಪ್ರಧಾನಮಂತ್ರಿಗಳು ಎಂದಿಗೂ ಬೀದಿ ಮಟ್ಟದ ರಾಜಕೀಯ ಭಾಷಣಗಳನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಮಂತ್ರಿಯ ಹುದ್ದೆಯ ಘನತೆ ಮತ್ತು ಗಾಂಭೀರ್ಯವನ್ನು ಅವರು ಕಾಪಾಡಿಕೊಂಡಿದ್ದರು. ಆದರೆ ನರೇಂದ್ರ ಮೋದಿ ಅವರು ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷಭಾವದ ರಾಜಕಾರಣದ ಮೂಲಕ ಆ ಘನತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2024–25ರೊಳಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವನ್ನಾಗಿಸುವುದಾಗಿ ಹೇಳಿದ್ದ ಪ್ರಧಾನಿ, ಈಗ ಜನರಿಗೆ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಹಾಗೂ ಖಾದ್ಯ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ತಪ್ಪಿಸಿ, ಗೊಬ್ಬರ ಬಳಕೆ ಕಡಿಮೆ ಮಾಡಿ ಎಂದು ಹೇಳುತ್ತಿರುವುದು ಯಾವ ಅಭಿವೃದ್ಧಿಯ ಲಕ್ಷಣ ಎಂದು ಅವರು ಪ್ರಶ್ನಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಖಾದ್ಯ ತೈಲಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಭಾರತ ಸಂಕಷ್ಟದಲ್ಲಿದೆ ಎಂದು ಹೇಳಿದ್ದಾರೆ. “ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ ದೇಶ ಇಂತಹ ಸ್ಥಿತಿಗೆ ತಲುಪುತ್ತಿರಲಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಆರ್ಥಿಕ ಸಾಧನೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ದೇಶದ ತಲಾ ಆದಾಯ 2.11 ಲಕ್ಷ ರೂಪಾಯಿಗಳಿದ್ದರೆ ಕರ್ನಾಟಕದ್ದು 4.33 ಲಕ್ಷ ರೂಪಾಯಿ, ದೇಶದ ಜಿಡಿಪಿ ಬೆಳವಣಿಗೆ ದರ 7.4 ಶೇಕಡಾ ಇದ್ದರೆ ಕರ್ನಾಟಕದ್ದು 8.1 ಶೇಕಡಾ, ಹಾಗೂ ಜಿಎಸ್ಟಿ ಸಂಗ್ರಹದಲ್ಲೂ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
“ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ ಎಂಬುದಕ್ಕೆ ಇನ್ನೇನು ಪುರಾವೆ ಬೇಕು?” ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಮುಂದಿನ ಬಾರಿ ಆರೋಪ ಮಾಡುವ ಮೊದಲು ಪೂರ್ವ ತಯಾರಿ ಮಾಡಿಕೊಂಡು ಮಾತನಾಡಬೇಕು ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ.
“ವಿಶ್ವಾಸದ್ರೋಹ ರಾಜಕಾರಣ”ದ ಕುರಿತು ಟೀಕಿಸಿದ ಅವರು, ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ನಂತರ ಅವುಗಳಿಗೆ ದ್ರೋಹ ಮಾಡಿರುವುದು ಬಿಜೆಪಿಯ ಇತಿಹಾಸ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ಒತ್ತಡಕ್ಕೆ ಒಳಪಡಿಸಿ ಪಕ್ಷಾಂತರ ಮಾಡಿಸುವ ಕೆಲಸವೂ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿಯ ಒಳಜಗಳದ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ, “ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ಪಕ್ಷದೊಳಗೆ ಹಲವು ಗುಂಪುಗಳಿವೆ” ಎಂದು ಹೇಳಿದ್ದಾರೆ.
ಪಕ್ಷವೇ ಅಮಾನತುಗೊಳಿಸಿದ್ದ ನಾಯಕರನ್ನು ಮತ್ತೆ ಕರೆದು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಪರಿಸ್ಥಿತಿ ಬಿಜೆಪಿ ಪಕ್ಷದಲ್ಲಿದೆ ಎಂದು ಟೀಕಿಸಿರುವ ಅವರು, “ಪ್ರಧಾನಿಯವರೇ, ಮೊದಲು ಕುಸಿಯುತ್ತಿರುವ ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಿ. ನಂತರ ನಮ್ಮ ಬಗ್ಗೆ ಮಾತನಾಡಿ” ಎಂದು ತೀವ್ರ ತಿರುಗೇಟು ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa