
ನವದೆಹಲಿ, 11 ಮೇ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನ ಸಭಾ ಚುನಾವಣೆಗಳು ಮುಗಿದ ತಕ್ಷಣ ಸರಣಿ ಗೆಜೆಟ್ ಅಧಿಸೂಚನೆಗಳ ಮೂಲಕ ಈ ಕಾರ್ಮಿಕ ಸಂಹಿತೆಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಖರ್ಗೆ, “ಮೋದಿ ಸರ್ಕಾರ ತನ್ನ ವಿಶಿಷ್ಟ ಹೇಡಿತನದ ಶೈಲಿಯಲ್ಲಿ, 2026ರ ಮೇ 8 ಮತ್ತು 9ರಂದು ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಅಧಿಸೂಚನೆಗಳ ಮೂಲಕ ಜಾರಿಗೆ ತಂದಿದೆ” ಎಂದು ಟೀಕಿಸಿದ್ದಾರೆ.
ಈ ಸಂಹಿತೆಗಳು ದೇಶದ ಕೋಟ್ಯಂತರ ಕಾರ್ಮಿಕರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಾಗಿ ಹೇಳಿರುವ ಅವರು, “ನೇಮಕಾತಿ ಮತ್ತು ವಜಾ ನೀತಿಗಳು, ಗುತ್ತಿಗೆ ಉದ್ಯೋಗ ವ್ಯವಸ್ಥೆ ಹಾಗೂ ಕಾರ್ಮಿಕ ಸಂಘಟನೆಗಳ ಹಕ್ಕುಗಳಿಗೆ ಇದರಿಂದ ಧಕ್ಕೆಯಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಕಾರ್ಮಿಕರೊಂದಿಗೆ ಸಮಾಲೋಚನೆ ಇಲ್ಲ”
ಮೋದಿ ಸರ್ಕಾರ ಯಾವುದೇ ಸಮಗ್ರ ಸಮಾಲೋಚನೆ ನಡೆಸದೇ ಈ ಸಂಹಿತೆಗಳನ್ನು ರೂಪಿಸಿದೆ ಎಂದು ಖರ್ಗೆ ಆರೋಪಿಸಿದ್ದಾರೆ. “2015ರಿಂದ ಇಂದಿನವರೆಗೆ ಭಾರತೀಯ ಕಾರ್ಮಿಕ ಸಮ್ಮೇಳನವೇ ನಡೆಸಿಲ್ಲ. ಕೈಗಾರಿಕೋದ್ಯಮಿ ಸ್ನೇಹಿತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಈ ಕಾನೂನುಗಳನ್ನು ತರಲಾಗಿದೆ” ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯಾನಂತರ ಕಾರ್ಮಿಕರ ಹಕ್ಕುಗಳಿಗೆ ಇದು ದೊಡ್ಡ ಹಿನ್ನಡೆಯಾಗಿದೆ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ನ ‘ಶ್ರಮಿಕ ನ್ಯಾಯ’ ಕಾರ್ಯಸೂಚಿ
ಭಾರತೀಯ ಕಾರ್ಮಿಕರ ಪರ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಿರುವ ಖರ್ಗೆ, ಪಕ್ಷದ ಐದು ಅಂಶಗಳ ‘ಶ್ರಮಿಕ ನ್ಯಾಯ’ ಕಾರ್ಯಸೂಚಿಯನ್ನು ಮುಂದಿಟ್ಟಿದ್ದಾರೆ.
ಅದರ ಪ್ರಮುಖ ಅಂಶಗಳು ಹೀಗಿವೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಪುನಃ ಬಲಪಡಿಸಿ ನಗರ ಪ್ರದೇಶಗಳಿಗೂ ವಿಸ್ತರಿಸುವುದು.
ದಿನಕ್ಕೆ ಕನಿಷ್ಠ 400 ರೂಪಾಯಿ ರಾಷ್ಟ್ರೀಯ ಕನಿಷ್ಠ ವೇತನ ನಿಗದಿ ಮಾಡುವುದು.
ಎಲ್ಲಾ ನಾಗರಿಕರಿಗೆ 25 ಲಕ್ಷ ರೂಪಾಯಿ ವರೆಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವ ‘ಆರೋಗ್ಯ ಹಕ್ಕು’ ಕಾನೂನು ಜಾರಿಗೊಳಿಸುವುದು.
ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸುವುದು.
ಸರ್ಕಾರಿ ಪ್ರಮುಖ ಕಾರ್ಯಗಳಲ್ಲಿ ಗುತ್ತಿಗೆ ಪದ್ಧತಿಯನ್ನು ಕಡಿಮೆ ಮಾಡಿ, ಮೋದಿ ಸರ್ಕಾರದ ಕಾರ್ಮಿಕ ಕಾನೂನು ಬದಲಾವಣೆಗಳನ್ನು ಮರುಪರಿಶೀಲಿಸುವುದು.
ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಸೂಚನೆಯನ್ನು ಖರ್ಗೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa