
ಚಂಡೀಗಡ, 10 ಮೇ (ಹಿ.ಸ.) :
ಆ್ಯಂಕರ್ : ಪಂಜಾಬ್ ಸಚಿವ ಸಂಜೀವ್ ಅರೋರಾಗೆ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಗುರುಗ್ರಾಮ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ಏಳು ದಿನಗಳ ಇಡಿ ವಶಕ್ಕೆ ಒಪ್ಪಿಸಿದೆ.
ಹರಿಯಾಣದ ಗುರುಗ್ರಾಮ್ನ ಎಂಜಿ ರಸ್ತೆಯಲ್ಲಿರುವ ಇಡಿ ಕಚೇರಿಯಲ್ಲಿ ಸಂಜೀವ್ ಅರೋರಾ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಶನಿವಾರ ಚಂಡೀಗಢದಲ್ಲಿರುವ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸುಮಾರು 10 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಅವರನ್ನು ಬಂಧಿಸಲಾಗಿತ್ತು.
ಇಡಿ ಮೂಲಗಳ ಪ್ರಕಾರ, ಸಚಿವ ಸಂಜೀವ್ ಅರೋರಾ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವ ಕೆಲವು ಕಂಪನಿಗಳು ₹157.12 ಕೋಟಿ ಮೌಲ್ಯದ ನಕಲಿ ಮಾರಾಟ ವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿವೆ. ಜೊತೆಗೆ ಶೆಲ್ ಕಂಪನಿಗಳ ಮೂಲಕ ನಕಲಿ ರಫ್ತುಗಳನ್ನು ತೋರಿಸಿ ಹಣಕಾಸು ಅಕ್ರಮ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳನ್ನೂ ತನಿಖಾ ಸಂಸ್ಥೆ ಹೊರಹಾಕಿದೆ.
ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ, ಹಣದ ಹಾದಿ, ಕಂಪನಿಗಳ ವ್ಯವಹಾರ ಹಾಗೂ ಸಂಬಂಧಿತ ದಾಖಲೆಗಳ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
ಸಂಜೀವ್ ಅರೋರಾ ಅವರು ಪಂಜಾಬ್ನ ಲುಧಿಯಾನ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಹುದ್ದೆ ನಿರ್ವಹಿಸುತ್ತಿದ್ದಾರೆ. ಪ್ರಕರಣವು ಪಂಜಾಬ್ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa