

ಬೆಂಗಳೂರು, 10 ಮೇ (ಹಿ.ಸ.) :
ಆ್ಯಂಕರ್ : ಸಮಾಜದ ಶಕ್ತಿಯೇ ರಾಷ್ಟ್ರ ನಿರ್ಮಾಣದ ನಿಜವಾದ ಆಧಾರ. ಸರ್ಕಾರಗಳು ಮಾತ್ರ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ. ಸಮಾಜ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ರಾಷ್ಟ್ರ ಹೊಸ ಎತ್ತರಕ್ಕೇರುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾನುವಾರ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಶ್ರಮದಲ್ಲಿ ನಿರ್ಮಿಸಲಾದ ಭವ್ಯ ಧ್ಯಾನ ಮಂದಿರವನ್ನು ಉದ್ಘಾಟಿಸಿ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಆಧ್ಯಾತ್ಮಿಕತೆ, ಯುವಶಕ್ತಿ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಮಾಜದ ಜವಾಬ್ದಾರಿಗಳ ಕುರಿತು ಮಾತನಾಡಿದರು.
“ಈ ಬೆಳಿಗ್ಗೆ ನನಗೆ ವಿಭಿನ್ನ ಅನುಭವ ನೀಡಿದೆ. ಮಕ್ಕಳಿಂದ ವೇದ ಮಂತ್ರಗಳೊಂದಿಗೆ ಸ್ವಾಗತ, ಗುರುದೇವರ ಆಶೀರ್ವಾದ, ಆರ್ಟ್ ಆಫ್ ಲಿವಿಂಗ್ನ ಸೇವಾ ಪರಂಪರೆ — ಇವೆಲ್ಲಾ ನನ್ನ ನೆನಪಿನಲ್ಲಿ ಸದಾ ಉಳಿಯುವ ಕ್ಷಣಗಳು” ಎಂದು ಪ್ರಧಾನಿ ಹೇಳಿದರು.
“ಬೆಂಗಳೂರು ಕೇವಲ ತಂತ್ರಜ್ಞಾನ ನಗರವಲ್ಲ”
ಬೆಂಗಳೂರು ನಗರದ ಬಗ್ಗೆ ವಿಶೇಷವಾಗಿ ಮಾತನಾಡಿದ ಪ್ರಧಾನಿ, “ಬೆಂಗಳೂರು ವಿಶ್ವಕ್ಕೆ ತನ್ನ ಸಾಫ್ಟ್ವೇರ್ ಮತ್ತು ಸೇವೆಗಳ ಮೂಲಕ ಪರಿಚಿತವಾಗಿದೆ. ಆದರೆ ಇದೇ ನಗರ ಭಾರತದ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಗುರುತಿಗೂ ಹೊಸ ದಿಕ್ಕು ನೀಡಿದೆ” ಎಂದು ಹೇಳಿದರು.
ನಗರದ ಜಾಗತಿಕ ಪ್ರತಿಷ್ಠೆಯನ್ನು ಉಲ್ಲೇಖಿಸಿದ ಅವರು, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮನ್ವಯವೇ ಬೆಂಗಳೂರಿನ ವಿಶೇಷತೆ ಎಂದು ಬಣ್ಣಿಸಿದರು.
“ಸಮಾಜ ಸರ್ಕಾರಕ್ಕಿಂತ ಶಕ್ತಿಶಾಲಿ”
ಸಮಾಜದ ಪಾತ್ರದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ನಾನು ಯಾವಾಗಲೂ ಸಮಾಜವು ಸರ್ಕಾರಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂದು ನಂಬಿದ್ದೇನೆ. ಯಾವುದೇ ಅಭಿಯಾನ ಯಶಸ್ವಿಯಾಗಬೇಕಾದರೆ ಅದರ ಹಿಂದೆ ಸಮಾಜದ ಬಲ ಇರಬೇಕು” ಎಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಅವರು, “ಸಂಕಲ್ಪ ಸ್ಪಷ್ಟವಾಗಿದ್ದು ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಪ್ರತಿಯೊಂದು ಪ್ರಯತ್ನವೂ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ” ಎಂದು ಹೇಳಿದರು.
ಯುವಶಕ್ತಿಯೇ ಭಾರತದ ಬಲ
ದೇಶದ ಯುವಜನರ ಸಾಧನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, “ಇಂದಿನ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆಗಳು ನಡೆಯುತ್ತಿವೆ. ಭಾರತ ಕೇವಲ ಅವುಗಳನ್ನು ಅನುಸರಿಸುತ್ತಿಲ್ಲ; ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ” ಎಂದು ಹೇಳಿದರು.
“ಭಾರತದ ಡಿಜಿಟಲ್ ಕ್ರಾಂತಿ ದೇಶವನ್ನು ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ. ಮೂಲಸೌಕರ್ಯ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ನವೋದ್ಯಮ ಕ್ಷೇತ್ರದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ” ಎಂದು ವಿವರಿಸಿದರು.
ಯುವ ವಿಜ್ಞಾನಿಗಳ ಸಾಧನೆಗಳನ್ನು ಉಲ್ಲೇಖಿಸಿದ ಅವರು, “ಇಂದು ನಮ್ಮ ಯುವಕರು ತಮ್ಮದೇ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದ್ದಾರೆ. ಈ ಸಾಧನೆಗಳ ಹಿಂದೆ ಯುವಶಕ್ತಿ ಮತ್ತು ಬದುಕುವ ಕಲೆಯ ಪ್ರೇರಣೆ ಇದೆ” ಎಂದು ಹೇಳಿದರು.
ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು
ಪರಿಸರ ಮತ್ತು ಕೃಷಿ ಕ್ಷೇತ್ರದ ಸವಾಲುಗಳ ಕುರಿತು ಮಾತನಾಡಿದ ಪ್ರಧಾನಿ, “ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ನಮ್ಮ ಹೊಲಗಳನ್ನೂ ಭೂಮಿ ತಾಯಿಯನ್ನೂ ಹಾನಿಗೊಳಿಸಿದೆ. ಭೂಮಿಯನ್ನು ರಾಸಾಯನಿಕಗಳಿಂದ ರಕ್ಷಿಸುವುದೂ ಬದುಕುವ ಕಲೆಯೇ ಆಗಿದೆ” ಎಂದು ಹೇಳಿದರು.
‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನವನ್ನು ಇನ್ನಷ್ಟು ವ್ಯಾಪಕಗೊಳಿಸುವಂತೆ ಕರೆ ನೀಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಸಮಾಜದ ಪಾತ್ರ ಅತ್ಯಂತ ಮುಖ್ಯ ಎಂದು ಹೇಳಿದರು.
“ಪರಿಸರ ಮತ್ತು ಆರ್ಥಿಕತೆಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನೀರಿನ ಪ್ರತಿಯೊಂದು ಹನಿಯನ್ನೂ ಉಳಿಸುವುದು ನಮ್ಮ ಜವಾಬ್ದಾರಿ” ಎಂದು ಹೇಳಿದ ಪ್ರಧಾನಿ, ‘ಪರ್ ಡ್ರಾಪ್, ಮೋರ್ ಕ್ರಾಪ್’ ಯೋಜನೆಯ ಮೂಲಕ ರೈತರಿಗೆ ನೀರಿನ ಸಮರ್ಪಕ ಬಳಕೆಯ ಅರಿವು ಮೂಡಿಸಲಾಗುತ್ತಿದೆ ಎಂದರು.
“ಮಿಷನ್ ಲೈಫ್ ಬದುಕಿನ ಹೊಸ ದಿಕ್ಕು”
ದೇಶದಲ್ಲಿ ಜಾರಿಯಲ್ಲಿರುವ ‘ಮಿಷನ್ ಲೈಫ್’ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಪ್ರಕೃತಿಯೊಂದಿಗೆ ಸಮತೋಲನದಲ್ಲಿರುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಚಳುವಳಿಯೇ ಮಿಷನ್ ಲೈಫ್. ಹೆಚ್ಚು ಜವಾಬ್ದಾರಿಯುತ ಬದುಕು ನಡೆಸುವ ಸಂದೇಶವನ್ನು ಅದು ನೀಡುತ್ತದೆ” ಎಂದು ಹೇಳಿದರು.
“ನನ್ನ ದೃಷ್ಟಿಯಲ್ಲಿ ಮಿಷನ್ ಲೈಫ್ ಕೂಡ ಆರ್ಟ್ ಆಫ್ ಲಿವಿಂಗ್ನ ಗೋಚರ ರೂಪವೇ ಆಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರವಿಶಂಕರ್ ಗೂರುಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವೇದ ಮಂತ್ರಗಳೊಂದಿಗೆ ಮಕ್ಕಳಿಂದ ಪ್ರಧಾನಿಗೆ ಸ್ವಾಗತ ಕೋರಲಾಯಿತು. ಶ್ರೀ ಗಣೇಶನ ದರ್ಶನ ಪಡೆದ ಬಳಿಕ ಧ್ಯಾನ ಮಂದಿರವನ್ನು ಉದ್ಘಾಟಿಸಿದ ಪ್ರಧಾನಿ, ಆಶ್ರಮದ ವಾತಾವರಣವನ್ನು ಮೆಚ್ಚಿಕೊಂಡರು.
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ಸ್ವಯಂಸೇವಕರು ಮತ್ತು ಗಣ್ಯರು ಭಾಗವಹಿಸಿದ್ದರು. ಧ್ಯಾನ ಮಂದಿರ ಉದ್ಘಾಟನೆಯ ಬಳಿಕ ಆಶ್ರಮದ ಆವರಣದಲ್ಲಿ ಆಧ್ಯಾತ್ಮಿಕ ಉತ್ಸಾಹದ ವಾತಾವರಣ ಉಂಟಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa