ಇಂದಿನಿಂದ ಪ್ರಧಾನಿ ಮೋದಿ ಮೂರು ರಾಜ್ಯಗಳ ಪ್ರವಾಸ
ನವದೆಹಲಿ, 10 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಕರ್ನಾಟಕ, ತೆಲಂಗಾಣ ಹಾಗೂ ಗುಜರಾತ್ ರಾಜ್ಯಗಳಿಗೆ ಮಹತ್ವದ ಪ್ರವಾಸ ಕೈಗೊಳ್ಳಲಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸ
Pm


ನವದೆಹಲಿ, 10 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಕರ್ನಾಟಕ, ತೆಲಂಗಾಣ ಹಾಗೂ ಗುಜರಾತ್ ರಾಜ್ಯಗಳಿಗೆ ಮಹತ್ವದ ಪ್ರವಾಸ ಕೈಗೊಳ್ಳಲಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಮಾನಸಿಕ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪ್ರಕೃತಿ ಸಂರಕ್ಷಣೆ ಹಾಗೂ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಹಲವು ರಾಷ್ಟ್ರವ್ಯಾಪಿ ಸೇವಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ತೆಲಂಗಾಣದ ಹೈದರಾಬಾದ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಸುಮಾರು 9,400 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹೈದರಾಬಾದ್ನಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಸಿಂಧು ಆಸ್ಪತ್ರೆಯನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಲಾಭರಹಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಈ ಆಸ್ಪತ್ರೆ ಮಲ್ಟಿ–ಸೂಪರ್ ಸ್ಪೆಷಾಲಿಟಿ ಹಾಗೂ ಅತ್ಯುನ್ನತ ಆರೋಗ್ಯ ಸೇವೆಗಳನ್ನು ಒದಗಿಸಲಿದೆ.

ಇದೇ ವೇಳೆ ಹೈದರಾಬಾದ್–ಪಣಜಿ ಆರ್ಥಿಕ ಕಾರಿಡಾರ್ನ ಭಾಗವಾಗಿರುವ ಗುಡೆಬೆಲೂರು–ಮಹಬೂಬನಗರ ನಡುವಿನ ರಾಷ್ಟ್ರೀಯ ಹೆದ್ದಾರಿ–167ರ ನಾಲ್ಕು ಪಥದ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 3,175 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ರಾಜ್ಯದ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದೆ.

ವಾರಂಗಲ್ನಲ್ಲಿ ಪ್ರಧಾನಿ ಮೋದಿ ಅವರು ಪಿಎಂ ಮಿತ್ರ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಕಾಕತೀಯ ಮೆಗಾ ಜವಳಿ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ. ಜವಳಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹಾಗೂ ಕೈಗಾರಿಕಾ ಹೂಡಿಕೆಗೆ ಇದು ಉತ್ತೇಜನ ನೀಡುವ ನಿರೀಕ್ಷೆಯಿದೆ.

ನಾಳೆ ಪ್ರಧಾನಿ ಮೋದಿ ಅವರು ಗುಜರಾತ್ನ ಸೋಮನಾಥ ದೇವಾಲಯದಲ್ಲಿ ನಡೆಯುವ “ಸೋಮನಾಥ ಅಮೃತ ಮಹೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನವೀಕರಿಸಲಾದ ದೇವಾಲಯದ ಉದ್ಘಾಟನೆಯ 75ನೇ ವರ್ಷದ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ವೇಳೆ ವಿಶೇಷ ಮಹಾಪೂಜೆ, ಕುಂಭಾಭಿಷೇಕ ಹಾಗೂ ಧ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಗಳು ಹಾಗೂ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಸಂಜೆ ಅವರು ಗುಜರಾತ್ನ ವಡೋದರಾಕ್ಕೆ ಭೇಟಿ ನೀಡಿ “ಸರ್ದಾರ್ಧಾಮ್” ವಿದ್ಯಾರ್ಥಿ ವಸತಿ ನಿಲಯವನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿ 1,000 ವಿದ್ಯಾರ್ಥಿಗಳು ಹಾಗೂ 1,000 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಸೋಮನಾಥ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮವು ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ನಾಗರಿಕ ಪರಂಪರೆಯ ಪ್ರತೀಕವಾಗಿ ಗಮನ ಸೆಳೆಯುತ್ತಿದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಸೋಮನಾಥ ದೇವಾಲಯವು ದೇಶದ ಭಕ್ತಿ ಹಾಗೂ ಸಂಸ್ಕೃತಿಯ ಮಹತ್ವದ ಕೇಂದ್ರವೆಂದು ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande