ಪ್ರಧಾನ ಮಂತ್ರಿ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ ಶಂಕೆ
ಆರ್ಟ್ ಆಫ್ ಲಿವಿಂಗ್ ಆಶ್ರಮದ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ
ಪ್ರಧಾನ ಮಂತ್ರಿ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ ಶಂಕೆ


ಬೆಂಗಳೂರು, 10 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗಂಭೀರ ಭದ್ರತಾ ಲೋಪ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮೋದಿ ಅವರ ಕಾರ್ಯಕ್ರಮಕ್ಕೂ ಸುಮಾರು ಒಂದೂವರೆ ಗಂಟೆ ಮೊದಲು ಕಗ್ಗಲೀಪುರದ ತಾತಗುಣಿ ಸಮೀಪದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಭಾಗದಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ನೈಸ್ ರಸ್ತೆ ಜಂಕ್ಷನ್ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ, ರಸ್ತೆಯಿಂದ ಸುಮಾರು 20 ರಿಂದ 25 ಅಡಿ ಅಂತರದಲ್ಲಿರುವ ಕಾಂಪೌಂಡ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಅನುಮಾನಾಸ್ಪದ ಪ್ಯಾಕೆಟ್ ಅನ್ನು ಗಮನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದರೊಳಗೆ ಎರಡು ಜಿಲೆಟಿನ್ ಕಡ್ಡಿಗಳು ಇದ್ದವು ಎಂಬುದು ದೃಢಪಟ್ಟಿದೆ.

ಘಟನೆಯ ನಂತರ ಪೊಲೀಸರು ತಕ್ಷಣವೇ ಸ್ಥಳವನ್ನು ಭದ್ರಪಡಿಸಿ ಜಿಲೆಟಿನ್ ಕಡ್ಡಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ. ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ. ಜಿಲೆಟಿನ್ ಕಡ್ಡಿಗಳು ಆ ಸ್ಥಳಕ್ಕೆ ಹೇಗೆ ಬಂದವು ಮತ್ತು ಅವುಗಳನ್ನು ಅಲ್ಲಿ ಯಾರು ಇಟ್ಟರು ಎಂಬ ಕುರಿತು ತೀವ್ರ ಪರಿಶೀಲನೆ ನಡೆಯುತ್ತಿದೆ.

ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande