
ಬೆಂಗಳೂರು, 10 ಮೇ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ದೇಶದ ಅತಿ ದೊಡ್ಡ ಮಹಿಳಾ ವಿರೋಧಿ ಪಕ್ಷ” ಎಂದು ಆರೋಪಿಸಿದ ಪ್ರಧಾನಿ, ಮಹಿಳಾ ಮೀಸಲು ಮಸೂದೆ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬಿಜೆಪಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಮಹಿಳಾ ಮೀಸಲು ಮಸೂದೆ ವರ್ಷಗಳ ಹಿಂದೆ ಜಾರಿಯಾಗಿದ್ದರೆ ದೇಶದಲ್ಲಿ ಮಹಿಳೆಯರ ರಾಜಕೀಯ ಶಕ್ತಿ ಇನ್ನಷ್ಟು ಹೆಚ್ಚುತ್ತಿತ್ತು. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಮಹಿಳಾ ಶಾಸಕರು ಮತ್ತು ಸಂಸದರು ಹೊರಹೊಮ್ಮಬಹುದಿತ್ತು. ಆದರೆ ಕಾಂಗ್ರೆಸ್ ಇದನ್ನು ತಡೆದು ಮಹಿಳೆಯರಿಗೆ ದ್ರೋಹ ಮಾಡಿದೆ” ಎಂದು ಆರೋಪಿಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಪ್ರಧಾನಿ ಮೋದಿ ತೀವ್ರ ಟೀಕೆ ನಡೆಸಿದರು. “ಕಾಂಗ್ರೆಸ್ ನಿರಾಸೆಯಲ್ಲಿ ಮುಳುಗಿದೆ. ಆ ಪಕ್ಷದಲ್ಲಿ ಯಾವುದೇ ಸಿದ್ಧಾಂತ ಉಳಿದಿಲ್ಲ. ಜನರ ಸಮಸ್ಯೆ ಬಗೆಹರಿಸುವ ಬದಲು ಸರ್ಕಾರ ಆಂತರಿಕ ಜಗಳದಲ್ಲೇ ಮುಳುಗಿದೆ” ಎಂದರು.
“ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ನಿಜಸ್ವರೂಪವನ್ನು ಜನ ನೋಡುತ್ತಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಎಷ್ಟು ದಿನ ಉಳಿಯುತ್ತಾರೆ, ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲೇ ಸರ್ಕಾರ ಸಿಲುಕಿದೆ” ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯನ್ನು ಉಲ್ಲೇಖಿಸಿದರು.
ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿ ಕಂಡುಬಂದಿತ್ತು. ಈಗ ಕೇರಳದಲ್ಲಿಯೂ ಕಾಂಗ್ರೆಸ್ ಒಳಜಗಳ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ “ಈ ಬಾರಿ ಕೇರಳದಲ್ಲಿ ಬಿಜೆಪಿ ಮೂರು ಸ್ಥಾನ ಗೆದ್ದಿದೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ಬಿಜೆಪಿ ಸರ್ಕಾರ ರಚನೆ ಮಾಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಅಸ್ಸಾಂನಲ್ಲಿ ಮೂರನೇ ಬಾರಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪುದುಚೇರಿಯಲ್ಲಿ ಎರಡನೇ ಬಾರಿ ಎನ್ಡಿಎ ಸರ್ಕಾರ ರಚನೆಯಾಗಿದೆ. ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹೊಸ ಇತಿಹಾಸ ನಿರ್ಮಿಸಿದೆ” ಎಂದು ಹೇಳಿದರು.
“ದೇಶದಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗುವ ಮೊದಲುವೇ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠ ಶಕ್ತಿಯಾಗಿತ್ತು. ಇಂದು ಆಂಧ್ರ ಪ್ರದೇಶದಲ್ಲಿ ಎನ್ಡಿಎ ಸರ್ಕಾರವಿದೆ. ತೆಲಂಗಾಣದಲ್ಲಿ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ರಾಜ್ಯ ಬಿಜೆಪಿ ನಾಯಕರು 13 ಕೆಜಿ ತೂಕದ ಬೆಳ್ಳಿ ಪ್ರತಿಮೆಯನ್ನು ನೀಡಿ ಗೌರವ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa