
ನವದೆಹಲಿ, 10 ಮೇ (ಹಿ.ಸ.) :
ಆ್ಯಂಕರ್ : ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಗೆ ನೀಡಿರುವ ಪರಿಸರ ಅನುಮತಿ ಅಪೂರ್ಣ ಹಾಗೂ ಅಸಮರ್ಪಕ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿಗಳ ಆಧಾರದಲ್ಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಪತ್ರ ಬರೆದು, ಯೋಜನೆಯ ಸಂಪೂರ್ಣ ಪರಿಸರ ಮೌಲ್ಯಮಾಪನ ಪ್ರಕ್ರಿಯೆಯನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಜೈರಾಮ್ ರಮೇಶ್ ಅವರ ಪ್ರಕಾರ, ಸರ್ಕಾರ ಬಿಡುಗಡೆ ಮಾಡಿದ ಗ್ರೇಟ್ ನಿಕೋಬಾರ್ ಯೋಜನೆ ಸಂಬಂಧಿತ ಎಫ್ಎಕ್ಯೂನಲ್ಲಿ ನೀಡಿರುವ ಹಲವು ಅಂಶಗಳು ಅಧಿಕೃತ ದಾಖಲೆಗಳು ಹಾಗೂ ಲಭ್ಯವಿರುವ ವೈಜ್ಞಾನಿಕ ಅಧ್ಯಯನಗಳಿಗೆ ಹೊಂದಿಕೆಯಾಗುವುದಿಲ್ಲ. ಒಂದೇ ಋತುವಿನ ಆಧಾರದ ಮೇಲೆ ನಡೆದ ಸೀಮಿತ ಅಧ್ಯಯನದಿಂದ ಇಂತಹ ಮಹತ್ವಾಕಾಂಕ್ಷಿ ಯೋಜನೆಗೆ ಅನುಮತಿ ನೀಡುವುದು ಪರಿಸರ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಅವರು ತಮ್ಮ ಪತ್ರದಲ್ಲಿ, ಗ್ರೇಟ್ ನಿಕೋಬಾರ್ ದ್ವೀಪ ಪ್ರದೇಶದ ಜೀವವೈವಿಧ್ಯತೆ ಅತ್ಯಂತ ಸೂಕ್ಷ್ಮ ಮತ್ತು ಅನನ್ಯವಾಗಿದ್ದು, ಕನಿಷ್ಠ ಮೂರು ಋತುಗಳನ್ನು ಒಳಗೊಂಡ ದೀರ್ಘಕಾಲೀನ ಮೂಲ ಅಧ್ಯಯನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 2021ರ ನಕ್ಷೆಯಲ್ಲಿ ಗಲಾಥಿಯಾ ಕೊಲ್ಲಿಯನ್ನು ಸವೆತ-ಪೀಡಿತ ಪ್ರದೇಶವಾಗಿ ಗುರುತಿಸಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಇಂತಹ ಪ್ರದೇಶದಲ್ಲಿ ತ್ವರಿತಗೊಳಿಸಿದ ಇಐಎ ಅಧ್ಯಯನ ವೈಜ್ಞಾನಿಕವಾಗಿ ಸಮರ್ಪಕವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜೈರಾಮ್ ರಮೇಶ್ ಆರೋಪದಂತೆ, 2020 ಡಿಸೆಂಬರ್ ರಿಂದ 2021 ಫೆಬ್ರವರಿವರೆಗೆ ಮಾತ್ರ ನಡೆದ ಸೀಮಿತ ಕ್ಷೇತ್ರ ಅಧ್ಯಯನದ ಆಧಾರದಲ್ಲೇ ಅಂತಿಮ ಇಐಎ ವರದಿ ಸಲ್ಲಿಸಲಾಗಿದೆ. ಜೊತೆಗೆ, ಕೆಲ ಅಧ್ಯಯನಗಳು ಕೆಲವೇ ದಿನಗಳ ಪರಿಶೀಲನೆ ಆಧಾರಿತವಾಗಿರುವುದರಿಂದ ಅದು ಸಮಗ್ರ ಮೌಲ್ಯಮಾಪನವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಯೋಜನೆಗೆ ನೀಡಿರುವ ಪರಿಸರ ಅನುಮತಿ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಿವೆ ಎಂಬುದು ಅವರ ವಾದವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಕೂಡ ಈ ವಿಷಯದಲ್ಲಿ ಕೆಲವು ನ್ಯೂನತೆಗಳನ್ನು ಗುರುತಿಸಿ ಉನ್ನತ ಮಟ್ಟದ ಸಮಿತಿ ರಚನೆಗೆ ಸೂಚಿಸಿದ್ದನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗ್ರೇಟ್ ನಿಕೋಬಾರ್ ಪ್ರದೇಶದ ಅಪರೂಪದ ಜೀವವೈವಿಧ್ಯತೆ ಮತ್ತು ದೀರ್ಘಕಾಲೀನ ಪರಿಸರ ಹಾನಿಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ವಿನ್ಯಾಸ ಹಾಗೂ ಅನುಮತಿ ಪ್ರಕ್ರಿಯೆಯನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಜೈರಾಮ್ ರಮೇಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa