
ಗುವಾಹಟಿ, 10 ಮೇ (ಹಿ.ಸ.) :
ಆ್ಯಂಕರ್ : ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್.ಡಿ.ಎ) ಸರ್ಕಾರ ರಚನೆ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಎನ್.ಡಿ.ಎ ಶಾಸಕಾಂಗ ಪಕ್ಷದ ನಾಯಕ ಹಾಗೂ ಹಾಲಿ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಅವರು ಭಾನುವಾರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅಧಿಕೃತ ಹಕ್ಕು ಮಂಡಿಸಿದ್ದಾರೆ.
ಗುವಾಹಟಿಯ ಲೋಕ ಭವನದಲ್ಲಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಯಾದ ಹಿಮಂತಾ ಬಿಸ್ವ ಶರ್ಮಾ ಅವರು, ಎನ್.ಡಿ.ಎ ಶಾಸಕರ ಬೆಂಬಲದ ಪತ್ರವನ್ನು ಸಲ್ಲಿಸಿ ಹೊಸ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ, ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ, ಅಸ್ಸಾಂ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಸೇರಿದಂತೆ ಎನ್ಡಿಎ ಮೈತ್ರಿಕೂಟದ ಹಲವು ಶಾಸಕರು ಹಾಗೂ ನಾಯಕರು ಉಪಸ್ಥಿತರಿದ್ದರು.
ಸರ್ಕಾರ ರಚನೆಗೆ ಅಗತ್ಯ ಬಹುಮತ ಲಭಿಸಿರುವ ಹಿನ್ನೆಲೆಯಲ್ಲಿ, ಅಸ್ಸಾಂನಲ್ಲಿ ನೂತನ ಎನ್.ಡಿ.ಎ ಸರ್ಕಾರದ ಪ್ರಮಾಣವಚನ ಸಮಾರಂಭ ಮೇ 12ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಾರಂಭದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಹಲವು ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa