
ವಿಜಯಪುರ, 01 ಮೇ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಬತ್ತಿದ ಹಳ್ಳಗಳಿಗೆ ಜೀವ ತುಂಬುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಲೋಹಗಾಂವ ಗ್ರಾಮದಲ್ಲಿ ಚೆಕ್ ಡ್ಯಾಂ (ಬಾಂದಾರ) ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.
ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ, ಸಿದ್ದಾಪುರ ಸೇರಿದಂತೆ ಅನೇಕ ಗ್ರಾಮಗಳ ಹಳ್ಳಗಳಿಗೆ ನೀರಿನ ಸಂರಕ್ಷಣೆ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು ₹9 ಕೋಟಿ 78 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಈ ಯೋಜನೆ, ಭೂಗರ್ಭ ಜಲಮಟ್ಟವನ್ನು ಹೆಚ್ಚಿಸುವ ಜೊತೆಗೆ ರೈತರ ಕೃಷಿ, ಹೈನುಗಾರಿಕೆ ಮತ್ತು ತೋಟಗಾರಿಕೆಗೆ ಬಲ ತುಂಬಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಬೋಸರಾಜು, ವಿಜಯಪುರ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಹಳ್ಳ ತುಂಬುವ ಯೋಜನೆ ದೇಶದ ಮಟ್ಟದಲ್ಲಿ ಮಾದರಿಯಾಗುವಂತಹ ಪರಿಣಾಮಕಾರಿ ನೀರಾವರಿ ಕ್ರಮವಾಗಿದೆ ಎಂದು ಶ್ಲಾಘಿಸಿದರು. ಈ ಯೋಜನೆ ನೀರಿನ ಸಂರಕ್ಷಣೆ ಹಾಗೂ ಪರಿಸರ ಸಮತೋಲನಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರೈತರು ಸಚಿವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವ ಸಲ್ಲಿಸಲಾಯಿತು. ಸುಮಂಗಲಿಯರು ಪೂರ್ಣಕುಂಭಗಳಿಂದ ಸ್ವಾಗತಿಸಿದರೆ, ರೈತರು ಹಣ್ಣುಗಳ ಮೂಲಕ ತುಲಾಭಾರ ನೆರವೇರಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ಕ್ಷಣ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು.
ಈ ಯೋಜನೆಯ ಮೂಲಕ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ, ಕೃಷಿ ಉತ್ಪಾದನೆಗೆ ಹೊಸ ಉತ್ತೇಜನ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande