
ಬೆಂಗಳೂರು, 09 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಆಟೋ ಚಾಲಕರು ಎದುರಿಸುತ್ತಿರುವ ಎಲ್ಪಿಜಿ (ಆಟೋ ಗ್ಯಾಸ್) ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ವಾಗ್ದಾಳಿ ನಡೆಸಿರುವ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾದಾಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ನೀವು, ಈಗ ಏಕೆ ಮೌನವಾಗಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ. ಕೇಂದ್ರದ ವೈಫಲ್ಯ ಎಂದು ಟೀಕಿಸುತ್ತಿದ್ದವರು, ಈಗ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ದ್ವಂದ್ವ ನೀತಿಯಾಗಿದೆ ಎಂದು ಆರೋಪಿಸಿದರು.
ಬೆಮಗಳೂರು ನಗರದ ಲಕ್ಷಾಂತರ ಆಟೋ ಚಾಲಕರು ಎಲ್ಪಿಜಿ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಅವರ ಕುಟುಂಬಗಳ ಬದುಕು ತತ್ತರಿಸಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಬಡವರ ಮೇಲಿನ ಅಸಡ್ಡೆಯಾಗಿದೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.
ದೆಹಲಿಯಲ್ಲಿ ತಮ್ಮದೇ ಸರ್ಕಾರವಿದ್ದರೂ, ಬೆಂಗಳೂರಿಗೆ ಅಗತ್ಯವಿರುವ ಗ್ಯಾಸ್ ಪೂರೈಕೆಗಾಗಿ ಮನವಿ ಮಾಡಲು ಕೇಂದ್ರ ಸಚಿವರಿಗೆ ತಾಕತ್ತು ಇಲ್ಲವೇ ಎಂದು ಪ್ರಶ್ನಿಸಿದ ಅವರು, ಕೇವಲ ಪ್ರಚಾರ ರಾಜಕೀಯಕ್ಕೆ ಸೀಮಿತವಾಗಿರುವುದು ಸರಿಯಲ್ಲ ಎಂದು ಹೇಳಿದರು.
“ತಕ್ಷಣವೇ ಕೇಂದ್ರ ಸರ್ಕಾರ ಅಗತ್ಯವಿರುವ ಎಲ್ಪಿಜಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa