
ನವದೆಹಲಿ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ ಅಪೌಷ್ಟಿಕತೆ ನಿವಾರಣೆ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪೋಷಣ್ ಪಖ್ವಾಡಾ 8ನೇ ಆವೃತ್ತಿ ಏಪ್ರಿಲ್ 9ರಿಂದ 23ರವರೆಗೆ ನಡೆಯಲಿದೆ.
ಈ ವರ್ಷದ ಪಖ್ವಾಡಾದ ವಿಷಯ “ಜೀವನದ ಮೊದಲ ಆರು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು” ಆಗಿದ್ದು, ಮಕ್ಕಳ ಆರಂಭಿಕ ವಯಸ್ಸಿನ ಪೋಷಣೆ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಾಹಿತಿಯಂತೆ, ರಾಷ್ಟ್ರೀಯ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಏಪ್ರಿಲ್ 9ರಂದು ಮಧ್ಯಾಹ್ನ 3ರಿಂದ 4ರವರೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಸಚಿವೆ ಸಾವಿತ್ರಿಬಾಯಿ ಠಾಕೂರ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮಿಷನ್ ಪೋಶನ್ 2.0 ಅಡಿಯಲ್ಲಿ ಈ ಪಖ್ವಾಡಾ ಆಚರಿಸಲಾಗುತ್ತಿದ್ದು, ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆಯಾಗಿದೆ.
ಪಖ್ವಾಡಾ ಅವಧಿಯಲ್ಲಿ ದೇಶದ ಅಂಗಣವಾಡಿ ಕೇಂದ್ರಗಳಲ್ಲಿ ಪೋಷಣ್ ಪಂಚಾಯಿತಿಗಳು, ಜಾಗೃತಿ ಕಾರ್ಯಕ್ರಮಗಳು, ಆರಂಭಿಕ ಕಲಿಕೆ ಚಟುವಟಿಕೆಗಳು, ಕ್ರೀಡಾ ಆಧಾರಿತ ಶಿಕ್ಷಣ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತ ಅಭಿಯಾನಗಳು ನಡೆಯಲಿವೆ. ತಾಯಂದಿರು, ಪೋಷಕರು ಮತ್ತು ಸಮುದಾಯದ ಸಕ್ರಿಯ ಭಾಗವಹಿಸುವಿಕೆಗೆ ಒತ್ತು ನೀಡಲಾಗಿದೆ.
ಸಚಿವಾಲಯದ ಪ್ರಕಾರ, ಮಕ್ಕಳಲ್ಲಿ 6 ವರ್ಷದೊಳಗೆ ಸುಮಾರು 85 ಪ್ರತಿಶತ ಮೆದುಳಿನ ಬೆಳವಣಿಗೆ ನಡೆಯುತ್ತದೆ. ಆದ್ದರಿಂದ ಮೊದಲ 1,000 ದಿನಗಳು ಪೋಷಣೆ, ಆರೈಕೆ ಹಾಗೂ ಕಲಿಕೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ. ಈ ಹಿನ್ನೆಲೆಯಲ್ಲಿ, ಸ್ತನ್ಯಪಾನ, ಪೂರಕ ಆಹಾರ ಹಾಗೂ ಆರಂಭಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉತ್ತಮ ಉಪಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸುವ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸುವ ಕಾರ್ಯವೂ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa