
ಬಾಗಲಕೋಟೆ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಇದೇ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರು ಇದ್ದಾರೆ. ಇದರಲ್ಲಿ 1,26,999 ಪುರುಷರು, 1,32,775 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿದ್ದಾರೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ 385 ಸೇವಾ ಮತದಾರರು, 170 ಅಂಚೆ ಮತಪತ್ರ ಮತದಾರರು ಹಾಗೂ 90 ಪಿಡಬ್ಲ್ಯೂಡಿ (ವಿಕಲಚೇತನ) ಮತದಾರರು ಇದ್ದಾರೆ. ಈ ಉಪಚುನಾವಣೆಗೆ ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನವನಗರದ ಸೆಕ್ಟರ್ ಸಂಖ್ಯೆ 43 ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಮೂವರು ಪೊಲಿಂಗ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಹೆಚ್ಚುವರಿ ಸಿಬ್ಬಂದಿ ಸೇರಿ ಒಟ್ಟು 1564 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಮೈಕ್ರೋ ಆಬ್ಸರ್ವರ್ಗಳನ್ನು ಕೂಡ ನೇಮಕ ಮಾಡಲಾಗಿದ್ದು, ಪೊಲೀಸ್ ಇಲಾಖೆಯಿಂದ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಮತದಾನ ಪ್ರಕ್ರಿಯೆ ಪಾರದರ್ಶಕವಾಗಿರಲು ಎಲ್ಲ 322 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮತದಾರರನ್ನು ಮತಚಲಾವಣೆಗೆ ಉತ್ತೇಜಿಸಲು ಎರಡು ಪಿಂಕ್ ಮತಗಟ್ಟೆ, ಒಂದು ಯುವ ಮತಗಟ್ಟೆ, ಒಂದು ಪಿಡಬ್ಲ್ಯೂಡಿ ಮತಗಟ್ಟೆ ಹಾಗೂ ಒಂದು ಥೀಮ್ ಆಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ವಿವರಿಸಿದರು.
*ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಜಪ್ತಿ*
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದು, ಈವರೆಗೆ 94.03 ಲಕ್ಷ ರೂ. ನಗದು, 39.73 ಲಕ್ಷ ರೂ. ಮೌಲ್ಯದ ಅಬಕಾರಿ ಇಲಾಖೆಯಿಂದ 14,637.01 ಲೀಟರ್ ಮದ್ಯ, ಪೊಲೀಸ್ ಇಲಾಖೆಯಿಂದ 194.36 ಲೀಟರ್ ಮದ್ಯ ಹಾಗೂ 9 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ 21 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಲ್ಲದೆ ಸುಮಾರು 1.20 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಸಹ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಅಂತಿಮ 72 ಮತ್ತು 48 ಗಂಟೆಗಳ ನಿಶ್ಶಬ್ದ ಅವಧಿ:
ಮತದಾನಕ್ಕೂ ಮುನ್ನದ 72 ಗಂಟೆಗಳ ಅವಧಿಯಲ್ಲಿ ಮತದಾರರನ್ನು ಪ್ರಭಾವಿಸುವ ಉಡುಗೊರೆ ವಸ್ತುಗಳ ವಿತರಣೆ, ಉಚಿತ ಊಟದ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಪ್ರಲೋಭನೆ ನೀಡುವುದನ್ನು ತೀವ್ರವಾಗಿ ನಿಗಾವಹಿಸಲಾಗುತ್ತಿದೆ ಎಂದು ಹೇಳಿದರು.
ಏಪ್ರಿಲ್ 7 ರಂದು ಸಂಜೆ 6 ಗಂಟೆಯಿಂದ ಬಹಿರಂಗ ಚುನಾವಣಾ ಪ್ರಚಾರ ಸಂಪೂರ್ಣ ನಿಷೇಧಿಸಲಾಗಿದ್ದು, ಹೊರಗಿನ ಮತ ಕ್ಷೇತ್ರಗಳಿಂದ ಬಂದ ರಾಜಕೀಯ ನಾಯಕರು, ಕಾರ್ಯಕರ್ತರು ಹಾಗೂ ಪ್ರಚಾರ ತಂಡಗಳು ಆ ಕ್ಷೇತ್ರವನ್ನು ತೊರೆಯಬೇಕು. ಮತದಾನಕ್ಕೂ ಮುನ್ನ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಗರಿಷ್ಠ ಐದು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅಲ್ಲದೇ ಏಪ್ರಿಲ್ 7 ಸಂಜೆ 6 ಗಂಟೆಯಿಂದ ಏಪ್ರಿಲ್ 9 ಮಧ್ಯರಾತ್ರಿ 12 ಗಂಟೆಯವರೆಗೆ ಬಾಗಲಕೋಟೆ ಮತಕ್ಷೇತ್ರದ ಸುತ್ತಮುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗಳಿಗೆ ಮಾರ್ಗಸೂಚಿ:
ಮತದಾನಕ್ಕೂ ಮುನ್ನದ 48 ಗಂಟೆಗಳ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರಸಾರವನ್ನು ಜನಪ್ರತಿನಿಧಿ ಕಾಯ್ದೆ 1951ರ ಕಲಂ 126ರ ಪ್ರಕಾರ ನಿಷೇಧಿಸಲಾಗಿದೆ. ಏಪ್ರಿಲ್ 8 ಮತ್ತು 9 ರಂದು ಯಾವುದೇ ಅಭ್ಯರ್ಥಿ ಅಥವಾ ಸಂಸ್ಥೆ ಪತ್ರಿಕೆಗಳಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೆ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿದರು.
ಈ ನಿಯಮ ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ. ಟಿವಿ, ರೇಡಿಯೋ, ಕೇಬಲ್ ನೆಟ್ವರ್ಕ್ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಮತದಾನಕ್ಕೂ ಮುನ್ನದ 48 ಗಂಟೆಗಳ ಅವಧಿಯಲ್ಲಿ ಓಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು ಅಥವಾ ಚರ್ಚೆ ನಡೆಸುವುದು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮತದಾನ ದಿನದ ಮಾರ್ಗಸೂಚಿ:
ಏಪ್ರಿಲ್ 9 ರಂದು ಮತದಾನ ದಿನ ಜಿಲ್ಲೆಯಾದ್ಯಂತ ನಡೆಯುವ ಜಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಮತಗಟ್ಟೆಯ ಒಳಗೆ ಅಥವಾ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರಚಾರ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಕರ್ತವ್ಯ ನಿರತ ಅಧಿಕಾರಿಗಳನ್ನು ಹೊರತುಪಡಿಸಿ ಯಾರಿಗೂ ಮೊಬೈಲ್ ಫೋನ್ ಬಳಕೆ ಮಾಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಬಕಾರಿ ಉಪ ಆಯುಕ್ತ ತಿಪ್ಪೇಸ್ವಾಮಿ ಡಿ.ಎನ್., ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande