
ಟೆಹ್ರಾನ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ 39ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಬೆಳಗಿನ ಜಾವಕ್ಕೂ ಮುನ್ನ, ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳ ಮೇಲೆ ಇಸ್ರೇಲ್ ಭಾರಿ ದಾಳಿ ನಡೆಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು ನೀಡಿದ ಮಾಹಿತಿಯ ಪ್ರಕಾರ, ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೆಲೆಗಳು, ಕ್ಷಿಪಣಿ ತಾಣಗಳು ಹಾಗೂ ಪೆಟ್ರೋಕೆಮಿಕಲ್ ಘಟಕಗಳನ್ನು ಗುರಿಯಾಗಿಸಲಾಗಿದೆ. ಕ್ಷಿಪಣಿಗಳು, ರಾಕೆಟ್ಗಳು ಹಾಗೂ ಡ್ರೋನ್ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಟೆಹ್ರಾನ್ ಮತ್ತು ಪಶ್ಚಿಮ ಉಪನಗರ ಕರಾಜ್ ಪ್ರದೇಶಗಳಲ್ಲಿ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ. ವಿಶೇಷವಾಗಿ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಶಕ್ತಿಶಾಲಿ ಸ್ಫೋಟ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ.
ಇದರ ನಡುವೆ, ಸೋಮವಾರ ದಿನವಿಡೀ ನಡೆದ ದಾಳಿಗಳಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ, ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದ್ದು, ಗಲ್ಫ್ ಪ್ರದೇಶದ ಪ್ರಮುಖ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರೆಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಕಠಿಣ ಸೈನಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದ್ದು, ಇದನ್ನು ಮುಚ್ಚುವ ಅಥವಾ ನಿಯಂತ್ರಿಸುವ ಯಾವುದೇ ಕ್ರಮ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.
ಶ್ವೇತಭವನದ ಹೇಳಿಕೆಯ ಪ್ರಕಾರ, ಇರಾನ್ ಮಾತುಕತೆಗೆ ಸಿದ್ಧವಾಗದಿದ್ದರೆ “ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ, ಅಮೆರಿಕ ರಾಷ್ಟ್ರೀಯ ಭದ್ರತಾ ತಂಡವು ಮಾತುಕತೆ ಪ್ರಾರಂಭಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ.
ಈ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಆತಂಕ ಉಂಟುಮಾಡಿದೆ. ಇಂಧನ ಸರಬರಾಜು, ಭದ್ರತೆ ಮತ್ತು ರಾಜತಾಂತ್ರಿಕ ಸಂಬಂಧಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa