ಇರಾನ್ ವೈಮಾನಿಕ ದಾಳಿ ; ಇಸ್ರೇಲ್ ನ ಮೂರು ನಗರಗಳಿಗೆ ಹಾನಿ
Attack


ಟೆಲ್ ಅವಿವ್, 04 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ಇಂದು ಮುಂಜಾನೆ ಇಸ್ರೇಲ್ ನ ಹಲವು ನಗರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ದಾಳಿಯಿಂದ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಮೂರು ನಗರಗಳಲ್ಲಿ ಹಾನಿ

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಇರಾನ್ ನಡೆಸಿದ ದಾಳಿಯಲ್ಲಿ ರಮತ್ ಗ್ಯಾನ್ ನಗರದಲ್ಲಿ ಒಂದು ಕಟ್ಟಡ ಕುಸಿದಿದೆ. ರೋಶ್ ಹಾಯಿನ್ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳು ದೃಢಪಡಿಸಿವೆ.

ಇದಲ್ಲದೆ, ನಿಯಾಟ್ ಹೊವಾವ್ ಕೈಗಾರಿಕಾ ಪ್ರದೇಶ (ಬೀರ್ಶೆಬಾ ದಕ್ಷಿಣ) ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆದಿದ್ದು, ಕೈಗಾರಿಕಾ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಬ್ನೈ ಬ್ರಾಕ್ ನಗರದಲ್ಲಿ ಒಬ್ಬರಿಗೆ ಸಣ್ಣ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮೆರಿಕದ ವಿಮಾನ ಹೊಡೆದುರುಳಿಸಿದ ಆರೋಪ :

ಅಲ್ ಜಜೀರಾ ವರದಿ ಪ್ರಕಾರ, ಇರಾನ್ ತನ್ನ ಸೇನೆ ಹಾರ್ಮುಜ್ ಜಲಸಂಧಿ ಸಮೀಪ ಮತ್ತೊಂದು ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ವಿಶೇಷವಾಗಿ A-10 ಮಾದರಿಯ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬುದು ಇರಾನ್ನ ಹೇಳಿಕೆ. ಆದರೆ ಈ ಕುರಿತು ಅಮೆರಿಕದ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಅಮೆರಿಕ-ಇರಾನ್ ವಾಗ್ವಾದ ತೀವ್ರ:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಕೆ ನೀಡಿದರೆ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅದನ್ನು “ಯುದ್ಧ ಅಪರಾಧಗಳಿಗೆ ಒಪ್ಪಿಗೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಯುದ್ಧದ ಹಿನ್ನಲೆ ಮತ್ತು ಹಾನಿ:

ಫೆಬ್ರವರಿ 28ರಿಂದ ಆರಂಭವಾದ ಅಮೆರಿಕ-ಇಸ್ರೇಲ್ ವಿರುದ್ಧದ ಸಂಘರ್ಷದಲ್ಲಿ, ಇರಾನ್ನಲ್ಲಿ ನಡೆದ ದಾಳಿಗಳಿಂದ ಸಾವಿರಾರು ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪರಿಸ್ಥಿತಿ ದಿನೇದಿನೇ ಗಂಭೀರವಾಗುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಮಟ್ಟದ ಸಂಘರ್ಷದ ಭೀತಿ ಹೆಚ್ಚುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande