ಗುಡುಗು ಮತ್ತು ಸಿಡಿಲು ; ಜಿಲ್ಲಾಡಳಿತದಿಂದ ಸಲಹೆ ಸೂಚನೆಗಳು
ಗದಗ, 06 ಏಪ್ರಿಲ್ (ಹಿ.ಸ.) : ಆ್ಯಂಕರ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಲಹೆ,ಸೂಚನೆಗಳನ್ನು ನೀಡಿರುತ್ತದೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು,ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ
ಫೋಟೋ


ಗದಗ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಲಹೆ,ಸೂಚನೆಗಳನ್ನು ನೀಡಿರುತ್ತದೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು,ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆಯಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಗುಡುಗು ಮತ್ತು ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಪಾಲಿಸಬೇಕಾದ ಸಲಹೆ ಸೂಚನೆಗಳು :

ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೊಟೋಕಾಲ್ ಮುಖಾಂತರ ಬರುವ ಸಂದೇಶಗಳನ್ನು ಮೊಬೈಲ್ನಲ್ಲಿ ಗಮನಿಸುವುದು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ, ಮತ್ತು ದೋಣಿಗಳನ್ನು ಚಲಾಯಿಸದಿರುವುದು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು. ಗುಡುಗು ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಾಗಿರುವುದಿಲ್ಲ. ಪ್ರಯುಕ್ತ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು. ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿ ಆಶ್ರಯ ಪಡೆಯುವುದು. ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರುವುದು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್ , ಪವನ ವಿದ್ಯುತ್ ಗೋಪುರ ಹಾಗೂ ರೈಲುಹಳಿಗಳಿಂದ ದೂರವಿರುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.

ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳುವುದು. ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಇವು ಸಿಡಿಲನ್ನು ಆಕರ್ಷಿಸುತ್ತವೆ. ಅರಣ್ಯ ಪ್ರದೆಶದಲ್ಲಿದ್ದರೆ ಸಣ್ಣ / ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯುವುದು. ಲೋಹದ ವಸ್ತುಗಳನ್ನು ಬಳಸಬಾರದು. ಮತ್ತು ದ್ವಿ ಚಕ್ರ ವಾಹನಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರುವುದು.

ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸಬಾರದು. ಕಬ್ಬಿಣದ ಸರಳಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿAದ ದೂರವಿರುವುದು. ಮಕ್ಕಳು, ವಯೋವೃದ್ಧರು, ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನ ಹರಿಸುವುದು. ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ ಅವಶೇಷಗಳನ್ನು ತೆಗೆದುಹಾಕುವುದು. ಸಿಡಿಲು ಉಂಟಾದಾಗ ಸಿಡಿಲು ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು. ಪಾತ್ರೆಗಳನ್ನು ತೊಳೆಯಬಾರದು. ಬಟ್ಟೆ ಒಗೆಯಬಾರದು.

ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು. ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡುವುದು. ಗುಡುಗು ಸಿಡಿಲಿನ ಸಮಯದಲ್ಲಿ ಮೋಟಾರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡದಿರುವುದು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಸಿಡಿಲಿನ ಸಂದರ್ಭದಲ್ಲಿ ವಾಹನ ಕಿಟಕಿಗಳನ್ನು ಮುಚ್ಚಿ ವಾಹನದ ಒಳಗೆ ಇರುವುದು. ಆಟದ ಮೈದಾನ, ಉದ್ಯಾನವನಗಳು, ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಡೆಯುವುದು. ದೋಣಿ ವಿಹಾರ ಅಥವ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ಮಿಂಚಿನ ಹೊಡೆತದಿಂದಾಗಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯಿರುವುದರಿಂದ ಅರಣ್ಯ ಪ್ರದೇಶದಿಂದ ದೂರವಿದ್ದು ಗಿಡಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು.

ಈ ಮೇಲ್ಕಂಡ ಸೂಚನಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande