ಕೊಪ್ಪಳ : ಬಾಲ್ಯವಿವಾಹ ತಡೆಗಟ್ಟಲು ಸೂಚನೆ
ಕೊಪ್ಪಳ, 06 ಏಪ್ರಿಲ್ (ಹಿ.ಸ.) : ಆ್ಯಂಕರ್: ಏಪ್ರಿಲ್ 20 ರಂದು ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳು ಹಾಗೂ ವೈಯಕ್ತಿಕ ವಿವಾಹಗಳು ಅತೀ ಹೆಚ್ಚಾಗಿ ಆಯೋಜನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹಗಳು ಜರುಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸಂಬಂಧಿಸಿದ ಬಾಲ್ಯವ
ಕೊಪ್ಪಳ : ಬಾಲ್ಯವಿವಾಹ ತಡೆಗಟ್ಟಲು ಸೂಚನೆ


ಕೊಪ್ಪಳ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್: ಏಪ್ರಿಲ್ 20 ರಂದು ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳು ಹಾಗೂ ವೈಯಕ್ತಿಕ ವಿವಾಹಗಳು ಅತೀ ಹೆಚ್ಚಾಗಿ ಆಯೋಜನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹಗಳು ಜರುಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸಂಬಂಧಿಸಿದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಅಗತ್ಯ ಮುಂಜಾಗ್ರತೆ ವಹಿಸಬೇಕೆಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಸೂಚಿಸಿದ್ದಾರೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಕಲಂ 13(4) ಪ್ರಕಾರ ಬಾಲ್ಯವಿವಾಹಗಳನ್ನು ತಡೆಗಟ್ಟಲು ಅಧಿಕಾರವನ್ನು ನೀಡಿದೆ. ಮದುವೆಯ ಹೆಸರಿನಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಬಾಲ್ಯ ವಿವಾಹ ಮುಕ್ತ ನಗರವನ್ನಾಗಿಸಲು ಎಲ್ಲಾ ಹಂತಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅರಿವು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾಗಿಯೂ ಇನ್ನೂ ಸಹ ಸಮುದಾಯಗಳಲ್ಲಿ ಸಾಕಷ್ಟು ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹವನ್ನು ಮಾಡುವುದು ಕಂಡುಬಂದಿರುವುದರಿಂದ ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕಾಗಿರುತ್ತದೆ.

ಕೊಪ್ಪಳ ನಗರಸಭೆ ವ್ಯಾಪ್ತಿಗೆ ಬರುವಂತಹ, ವಿವಿಧ ಸಂಘ ಸಂಸ್ಥೆಯವರು ಆಯೋಜಿಸುವಂತಹ ಸಾಮೂಹಿಕ ವಿವಾಹಗಳಲ್ಲಿ ಮತ್ತು ವೈಯಕ್ತಿಕ ವಿವಾಹಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಆದ ಕಾರಣ ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸಾಮೂಹಿಕ ವಿವಾಹ ಅಥವಾ ವೈಯಕ್ತಿಕ ವಿವಾಹಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಜರುಗದಂತೆ ಪ್ರತಿಯೊಬ್ಬರೂ ಸೂಕ್ತ ಮುಂಜಾಗ್ರತೆ ವಹಿಸುವಂತೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande