ಬಿಜೆಪಿ, ಜೆಡಿಎಸ್ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ
ಪ್ರತಿ
Cm


ದಾವಣಗೆರೆ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ , ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ನಾಯಕರು ಹಿಂದೆ ಬಿಜೆಪಿ, ಆರ್ ಎಸ್ ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಿದ ಟೀಕೆಗಳನ್ನು ನೆನಪಿಸಿಕೊಂಡು, “ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸೇರಿರುವ ಇವರು, ಮೊದಲು ಏನೆಲ್ಲ ಮಾತಾಡಿದ್ದಾರೆ ಎಂಬುದನ್ನು ಜನ ಮರೆತಿಲ್ಲ” ಎಂದು ಹೇಳಿದರು.

“ಬಿಜೆಪಿ ವಿರುದ್ಧ ತೀವ್ರ ಟೀಕೆ ಮಾಡಿದವರೇ ಇಂದು ಅದೇ ಪಕ್ಷದ ಬೆಂಬಲ ಪಡೆಯುತ್ತಿರುವುದು ವಿಚಿತ್ರ. ಇಂತಹವರಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕ ಹಕ್ಕು ಇಲ್ಲ” ಎಂದರು.

ರಾಜ್ಯದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಜನರು ಈ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಬಿಜೆಪಿ ಇವುಗಳನ್ನು ವಿರೋಧಿಸುತ್ತಿದ್ದು, ಬಡವರ ವಿರೋಧಿ ನಿಲುವು ತಾಳುತ್ತಿದೆ ಎಂದು ಆರೋಪಿಸಿದರು. “ಸಂವಿಧಾನ ವಿರೋಧಿ ಮನೋಭಾವ ಹೊಂದಿರುವ ಬಿಜೆಪಿಗೆ ಬೆಂಬಲಿಸಲು ಜನರಿಗೆ ಯಾವುದೇ ಕಾರಣವಿಲ್ಲ” ಎಂದರು.

ಕುಟುಂಬ ರಾಜಕಾರಣದ ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, “ಜನರೇ ಕರೆದುಕೊಂಡು ಬಂದರೆ ಚುನಾವಣೆಗೆ ನಿಲ್ಲುವುದು ತಪ್ಪಲ್ಲ. ಹಾಗಿದ್ದರೆ ಚನ್ನಪಟ್ಟಣದಲ್ಲಿ ಅವರ ಮಗ ಸೋತದ್ದು ಏಕೆ?” ಎಂದು ಪ್ರಶ್ನಿಸಿದರು.

ಚಲುವಾದಿ ನಾರಾಯಣಸ್ವಾಮಿ ಕುರಿತು ಮಾತನಾಡಿದ ಅವರು, “ಮೊದಲು ಕಾಂಗ್ರೆಸ್ನಲ್ಲಿ ಲಾಭ ಪಡೆದು, ಈಗ ಬಿಜೆಪಿಗೆ ಹೋಗಿ ಅಲ್ಲಿಯೂ ಲಾಭ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದರು.

ಇದೇ ವೇಳೆ, ಜೆಡಿಎಸ್ ಪಕ್ಷದ ಹಿನ್ನಡೆಯನ್ನೂ ಉಲ್ಲೇಖಿಸಿದ ಸಿದ್ದರಾಮಯ್ಯ, “ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸೀಟು ಗೆದ್ದಿದ್ದ ಪಕ್ಷ, ನಂತರ 19ಕ್ಕೆ ಇಳಿದಿದೆ” ಎಂದು ಟೀಕಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande