ಬಿಸಿಲಿನ ತಾಪ ಹೆಚ್ಚಳ : ಈಜುಕೊಳಗಳಲ್ಲಿ ಫುಲ್ ರಶ್
ಗದಗ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಕಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಜನರು ತಂಪಿನ ಹುಡುಕಾಟದಲ್ಲಿ ಈಜುಕೊಳಗಳತ್ತ ಮುಖ ಮಾಡುತ್ತಿದ್ದಾರೆ. ಉರಿ ಉರಿ ಬಿಸಿಲಿನಿಂದ ಮುಕ್ತಿ ಪಡೆಯಲು ಯುವಕರು ಹಾಗೂ ಮಕ್ಕಳು ಸ್ವಿಮಿಂಗ್ ಫೂಲ್ಗಳ
ಫೋಟೋ


ಗದಗ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಕಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ಜನರು ತಂಪಿನ ಹುಡುಕಾಟದಲ್ಲಿ ಈಜುಕೊಳಗಳತ್ತ ಮುಖ ಮಾಡುತ್ತಿದ್ದಾರೆ. ಉರಿ ಉರಿ ಬಿಸಿಲಿನಿಂದ ಮುಕ್ತಿ ಪಡೆಯಲು ಯುವಕರು ಹಾಗೂ ಮಕ್ಕಳು ಸ್ವಿಮಿಂಗ್ ಫೂಲ್ಗಳಲ್ಲಿ ಮಿಂದೆದ್ದು ಕೂಲ್ ಕೂಲ್ ಅನುಭವಿಸುತ್ತಿದ್ದಾರೆ.

ಬೆಳಿಗ್ಗೆ 11 ಗಂಟೆಯಾದರೂ ಸಾಕು, ಬಿಸಿಲಿನ ತೀವ್ರತೆ ನೆತ್ತಿ ಸುಡುವಂತಾಗಿದ್ದು, ಬಿಸಿ ಗಾಳಿಯಿಂದ ಜನರು ತತ್ತರಿಸುವಂತಾಗಿದೆ. ಮನೆಗಳೂ ಕೂಡ ಕಾದು ಕೆಂಡವಾಗುತ್ತಿರುವ ಪರಿಸ್ಥಿತಿಯಲ್ಲಿ ಜನರು ಈಜುಕೊಳಗಳಿಗೆ ಧಾವಿಸುತ್ತಿದ್ದಾರೆ. ಇದರಿಂದ ನಗರದಲ್ಲಿನ ಸ್ವಿಮಿಂಗ್ ಫೂಲ್ಗಳು ದಿನೇದಿನೇ ಫುಲ್ ರಶ್ ಕಾಣುತ್ತಿವೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ನಾಲ್ಕು ಹೈಟೆಕ್ ಈಜುಕೊಳಗಳು ಜನರಿಗೆ ದೊಡ್ಡ ಮಟ್ಟದ ಅನುಕೂಲ ಒದಗಿಸುತ್ತಿವೆ. ಜಿಲ್ಲಾ ಕ್ರೀಡಾಂಗಣ, ಕಳಸಾಪುರ ರಸ್ತೆಯ ನಂದೀಶ್ವರ ನಗರ, ರಾಜೀವ ಗಾಂಧಿ ನಗರ ಹಾಗೂ ಬೆಟಗೇರಿಯ ವಸಂತಸಿಂಗ್ ಜಮಾದಾರ ನಗರದಲ್ಲಿರುವ ಈಜುಕೊಳಗಳಲ್ಲಿ ಯುವಕರು ಹಾಗೂ ಮಕ್ಕಳು ವಿವಿಧ ಭಂಗಿಗಳಲ್ಲಿ ಡೈ ಹೊಡೆದು ಸಂಭ್ರಮಿಸುತ್ತಿದ್ದಾರೆ.

ಹಿಂದೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಈಜುಕೊಳ ಸೌಲಭ್ಯ ಇದೀಗ ಬಡವರಿಗೂ ಲಭ್ಯವಾಗಿರುವುದು ವಿಶೇಷ. ಕೇವಲ ಒಂದು ಗಂಟೆಗೆ ₹50 ದರ ನಿಗದಿ ಮಾಡಿರುವುದರಿಂದ ಗದಗ ಸುತ್ತಮುತ್ತಲಿನ ಗ್ರಾಮಗಳಿಂದಲೂ ಯುವಕರು ನಗರಕ್ಕೆ ಆಗಮಿಸಿ ಈಜಿನಲ್ಲಿ ತೊಡಗುತ್ತಿದ್ದಾರೆ.

ಈ ಕುರಿತು ಈಜುಕೊಳಕ್ಕೆ ಬಂದ ಯುವಕರು ಮುತ್ತರಾಜ್ ಹಾಗೂ ರಾಜೇಸಾಬ್ ತಮ್ಮ ಅನುಭವ ಹಂಚಿಕೊಂಡು, “ಬಿಸಿಲಿನಿಂದ ರಕ್ಷಣೆ ಪಡೆಯಲು ಮತ್ತು ಮನರಂಜನೆಗಾಗಿ ಇದು ಉತ್ತಮ ವ್ಯವಸ್ಥೆ. ಕಡಿಮೆ ದರದಲ್ಲಿ ಈ ಸೌಲಭ್ಯ ದೊರೆಯುತ್ತಿರುವುದು ಖುಷಿ ತಂದಿದೆ,” ಎಂದು ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಶರಣು ಗೋಗೇರಿ ಮಾತನಾಡಿ, “ಸ್ವಚ್ಛತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲ ವರ್ಗದ ಜನರು ಅನುಕೂಲವಾಗುವಂತೆ ದರ ನಿಗದಿ ಮಾಡಲಾಗಿದೆ,” ಎಂದು ತಿಳಿಸಿದರು.

ಈಜುಕೊಳಗಳಿಂದ ಉತ್ತಮ ಆದಾಯವೂ ಲಭ್ಯವಾಗುತ್ತಿದ್ದು, ವಾರಕ್ಕೆ ಸುಮಾರು ₹1.5ರಿಂದ ₹2 ಲಕ್ಷವರೆಗೆ ಆದಾಯ ಬರುತ್ತಿದೆ ತಿಳಿಸಿದ್ದಾರೆ.

ಒಟ್ಟಾರೆ ಬಿಸಿಲಿನ ತೀವ್ರತೆಗೆ ತತ್ತರಿಸಿರುವ ಜನರಿಗೆ ಈಜುಕೊಳಗಳು ತಂಪಿನ ತಾಣವಾಗಿದ್ದು, ಬೇಸಿಗೆಯ ಮಜಾ ಅನುಭವಿಸಲು ಜನರು ಹೆಚ್ಚಾಗಿ ಆಗಮಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande