
ಗದಗ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ 2026-27 ರ ಮುಂಗಾರು ಹಂಗಾಮಿಗೆ ರಸಗೊಬ್ಬರಗಳ ಪೂರೈಕೆ, ದಾಸ್ತಾನು ಮತ್ತು ವಿತರಣಾ ವ್ಯವಸ್ಥೆಯನ್ನು ಸುಗಮಗೊಳಿಸಲು ಕೃಷಿ ಇಲಾಖೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ. ಮುಂಗಾರಿನಲ್ಲಿ ರೈತರಿಗೆ ರಸಗೊಬ್ಬರಗಳ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡುವುದು ಹಾಗೂ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಧ್ಯ ಪ್ರಾಚ್ಯ ರಾಷ್ಟçಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾ ವಸ್ತುಗಳ ಆಮದಿನಲ್ಲಿ ವ್ಯತ್ಯಯವಾಗುವ ಸಾದ್ಯತೆ ಇದೆ. ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಂಭವವಿದೆ. ಇದರಿಂದ ರಸಗೊಬ್ಬರ ವಿತರೆಣೆಯ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಕೃಷಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಸಗೊಬ್ಬರ ಖರೀದಿ ಮಾಡಬೇಕು ಎಂದಾದರೆ ರೈತರು ಕಡ್ಡಾಯವಾಗಿ ಎಪ್ ಐ ಡಿ ಹೊಂದಿರಬೇಕು.
ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವುದು ಮತ್ತು ಜಿಲ್ಲೆಯ ರೈತರು ಸಹ ಮಿತವ್ಯವಯವಾಗಿ ರಸಗೊಬ್ಬರಗಳ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕೆ ಕೆ-ಕಿಸಾನ ತಂತ್ರಾಂಶದ ಮೂಲಕ ರಸಗೊಬ್ಬರಗಳ ವಿತರಣೆ ಮಾಡಲಾಗುತ್ತದೆ. ಅಂದರೆ ರೈತರ ಭೂಮಿ, ಹಾಕಿದ ಬೆಳೆಯ ಆಧಾರದಲ್ಲಿ ಬೇಕಾಗುವ ಪ್ರಮಾಣದ ರಸಗೊಬ್ಬರಗಳನ್ನು ಮಾತ್ರ ಕೆ-ಕಿಸಾನ್ ತಂತ್ರಾಂಶದ ಮೂಲಕವೇ ವಿತರಣೆ ಮಾಡಲಾಗುತ್ತದೆ. ರೈತರು ಈಗಾಗಲೇ ಎಫ್ ಐ ಡಿ ಹೊಂದಿದ್ದಲ್ಲಿ ನಿಮ್ಮ ಎಲ್ಲಾ ಸರ್ವೆ ನಂಬರ್ಗಳನ್ನು ಆಯಾ ಎಫ್ ಐ ಡಿ ಗೆ ಲಿಂಕ್ ಮಾಡಿಕೊಳ್ಳುವುದು ಅಥವಾ ಎಫ್ ಐ ಡಿ ಇಲ್ಲದೇ ಇದ್ದಲ್ಲಿ ಹೊಸದಾಗಿ ಎಪ್ ಐ ಡಿ ಸೃಜಿಸಿಕೊಳ್ಳಲು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು, ಗದಗ ಇವರು ತಿಳಿಸಿರುತ್ತಾರೆ.
ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರು ರಸಗೊಬ್ಬರಗಳನ್ನು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದ ಮೂಲಕ ರೈತರ ಎಪ್ ಐ ಡಿ ನಮೂದಿಸಿ ಮಾರಾಟ ಮಾಡಬೇಕು ಹಾಗೂ ತಮ್ಮ ಎಲ್ಲಾ ಓ-ಫಾರ್ಮ ನವೀಕರಣ ಮಾಡಿಸಿಕೊಳ್ಳಬೇಕು. ಒಂದು ವೇಳೆ ಮಾರಾಟಗಾರರ ಪರವಾನಗಿಯ ಅವಧಿ ಮುಗಿದಿದ್ದರೆ, ಓ-ಫಾರ್ಮ ಗಳ ನೊಂದಣಿ ಮಾಡದೇ ಮಾರಾಟ ಮಾಡಿದ್ದಲ್ಲಿ, ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರಗಳ ಮಾರಾಟ ಮಾಡುವುದು ಕಂಡುಬಂದಲ್ಲಿ, ಕಳ್ಳಸಾಗಾಣಿಕೆ, ಕೃತಕ ಅಭಾವ ಸೃಷ್ಟಿಸಿದ್ದಲ್ಲಿ, ಅಕ್ರಮ ದಾಸ್ತಾನು ಮಾಡಿದ್ದಲ್ಲಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ರಸಗೊಬ್ಬರಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆ ಎಪ್ ಐಡಿ 1985 ರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರು ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಗದಗ ಜಂಟಿ ಕೃಷಿ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP