
ಗದಗ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸವಿತಾ ಸಮಾಜದ ಸಾಂಪ್ರದಾಯಿಕ ‘ಕ್ಷೌರಿಕ’ ವೃತ್ತಿಯ ಅಸ್ಮಿತೆಯನ್ನು ಕಾಪಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಮಾಜದ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಮನವಿ ಸಲ್ಲಿಕೆಯ ವೇಳೆ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, “ಅಸಂಘಟಿತ ಕಾರ್ಮಿಕ ಮಂಡಳಿಯಿಂದ ಸವಿತಾ ಸಮಾಜದವರ ಕುಲಕಸುಬಾದ ‘ಕ್ಷೌರಿಕ’ (ಬಾರ್ಬರ್) ವೃತ್ತಿಯ ಹೆಸರನ್ನು ಅನ್ಯ ಸಮಾಜದವರು ನಡೆಸುವ ಬ್ಯೂಟಿ ಪಾರ್ಲರ್ಗಳಿಗೆ ನೀಡಲಾಗುತ್ತಿದೆ.
ಇದರಿಂದ ನೈಜ ಫಲಾನುಭವಿಗಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು, ವಿಮೆ ಹಾಗೂ ಆರ್ಥಿಕ ಪ್ಯಾಕೇಜ್ಗಳು ಅನ್ಯರ ಪಾಲಾಗುತ್ತಿವೆ. ಇದು ಸಮಾಜಕ್ಕೆ ಆಗುತ್ತಿರುವ ಅನ್ಯಾಯ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಡಕ್ ಸೂಚನೆ
ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಬ್ಯೂಟಿ ಪಾರ್ಲರ್ ನಡೆಸುವವರಿಗೆ ‘ಬ್ಯೂಟಿಷಿಯನ್’ ಎಂಬ ಹೆಸರಿನಲ್ಲಿ ಮಾತ್ರ ಕಾರ್ಡ್ ನೀಡಬೇಕು ಹಾಗೂ ಸವಿತಾ ಸಮಾಜದವರಿಗೆ ಮಾತ್ರ ‘ಕ್ಷೌರಿಕ’ (ಬಾರ್ಬರ್) ಎಂದು ನಮೂದಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಇದಲ್ಲದೆ, ನಿಯಮ ಉಲ್ಲಂಘಿಸಿ ಇತರರಿಗೆ ‘ಬಾರ್ಬರ್’ ಕಾರ್ಡ್ ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ, ಅಂತಹ ಎಲ್ಲಾ ಕಾರ್ಡ್ಗಳ ವಿವರಗಳೊಂದಿಗೆ ಕಚೇರಿಗೆ ಹಾಜರಾಗುವಂತೆ ಸೂಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
“ನಮ್ಮ ಸಮಾಜದ ಹಕ್ಕುಗಳನ್ನು ಕಸಿಯುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಜಿಲ್ಲಾಧಿಕಾರಿಗಳ ತಕ್ಷಣದ ಸ್ಪಂದನೆ ನ್ಯಾಯದ ಮೇಲೆ ನಂಬಿಕೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ನೈಜ ಸವಿತಾ ಸಮಾಜದವರಿಗೆ ಮಾತ್ರ ‘ಕ್ಷೌರಿಕ’ ಕಾರ್ಡ್ ದೊರೆಯುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಕೃಷ್ಣಾ ಎಚ್. ಹಡಪದ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಂತ ಸೇನಾ ಮಹಾರಾಜ್ ನಾಬಿಕ್ ಮರಾಠ (ಸವಿತಾ) ಸಮಾಜದ ಅಧ್ಯಕ್ಷ ವಿಕಾಸ ಕ್ಷೀರಸಾಗರ್, ಹಿರಿಯರಾದ ಹನುಮಂತಪ್ಪ ರಾಂಪುರ, ಯುವ ನಾಯಕ ಆನಂದ ಮಾನೆ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP