
ಗದಗ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಗ್ರಾಮೀಣ ಅನ್ನದಾತರ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಕಲ್ಲಂಗಡಿ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆದ ಬೆಳೆ ಮಾರಾಟವಾಗದೇ ಹೊಲದಲ್ಲೇ ಕೊಳೆತು ಹೋಗುತ್ತಿರುವ ದುಸ್ಥಿತಿ ನಿರ್ಮಾಣವಾಗಿದೆ.
ಮಾಗಡಿ ಗ್ರಾಮವು ಕಲ್ಲಂಗಡಿ ಬೆಳೆಗೆ ಪ್ರಸಿದ್ಧಿಯಾಗಿದ್ದು, ಪ್ರತಿವರ್ಷ ಇಲ್ಲಿ ಬೆಳೆದ ಕಲ್ಲಂಗಡಿಗೆ ಹೊರರಾಜ್ಯ ಹಾಗೂ ವಿದೇಶಗಳಲ್ಲಿ ಭಾರೀ ಬೇಡಿಕೆ ಇರುತ್ತಿತ್ತು. ವ್ಯಾಪಾರಸ್ಥರು ನೇರವಾಗಿ ಗ್ರಾಮಕ್ಕೆ ಬಂದು ಟನ್ಗಟ್ಟಲೆ ಕಲ್ಲಂಗಡಿ ಖರೀದಿ ಮಾಡಿ ರಫ್ತು ಮಾಡುತ್ತಿದ್ದರು. ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಫ್ತು ಮಾರುಕಟ್ಟೆ ಕುಸಿತ ಕಂಡಿದ್ದು, ವ್ಯಾಪಾರಸ್ಥರು ಗ್ರಾಮಕ್ಕೆ ಬರುವುದೇ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಕಟಾವು ಮಾಡಿದ ಕಲ್ಲಂಗಡಿ ಹಣ್ಣುಗಳನ್ನು ರೈತರು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿ ರಾಶಿ ಹಾಕಿ ಶೇಖರಣೆ ಮಾಡಿಕೊಂಡು ಕುಳಿತಿರುವ ರೈತರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಷ್ಟವನ್ನು ಎದುರಿಸುತ್ತಿದ್ದಾರೆ.
ಸ್ಥಳೀಯ ಮಾರುಕಟ್ಟೆಯಲ್ಲಿಯೂ ಬೆಲೆ ಕುಸಿತ ಕಂಡುಬಂದಿದ್ದು, ಖರೀದಿದಾರರ ಕೊರತೆ ತೀವ್ರವಾಗಿದೆ. ಹೊರ ದೇಶಗಳಿಗೆ ರಫ್ತು ಆಗಬೇಕಿದ್ದ ಕಲ್ಲಂಗಡಿ ಹಣ್ಣುಗಳು ಈಗ ಹೊಲದಲ್ಲೇ ಕೊಳೆತು ಹೋಗುತ್ತಿವೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.
ಮಾಗಡಿ ಗ್ರಾಮದ ರೈತ ಗೋಪಾಲಗೌಡ ಭರಮಗೌಡ್ರು ಅವರು ನಾಲ್ಕು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದು, ಸುಮಾರು ನಾಲ್ಕು ರಿಂದ ಐದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಉತ್ತಮ ಬೆಳೆಯನ್ನು ಪಡೆದಿದ್ದರೂ, ಮಾರಾಟದ ಅಭಾವದಿಂದ ಸುಮಾರು 50 ರಿಂದ 60 ಟನ್ ಕಲ್ಲಂಗಡಿ ಹಣ್ಣು ಹೊಲದಲ್ಲೇ ಉಳಿದುಕೊಂಡಿದೆ. ಖರೀದಿದಾರರ ಕೊರತೆಯಿಂದ ಹಣ್ಣುಗಳು ಕೊಳೆತು ಹೋಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯು ಬೆಳೆ ಮೇಲೆ ಮತ್ತಷ್ಟು ಹಾನಿ ಉಂಟುಮಾಡಿದೆ. ಈಗಾಗಲೇ ಮಾರುಕಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದ ರೈತರಿಗೆ ಪ್ರಕೃತಿ ವಿಕೋಪವೂ ಬೆನ್ನಿಗೆ ಬಿದ್ದಂತಾಗಿದೆ. ಕೃಷಿಗೆ ಹೂಡಿಕೆ ಮಾಡಿದ ಹಣ ವಾಪಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾಲದ ಬಾಧೆ ಹೆಚ್ಚುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ ಕಲ್ಲಂಗಡಿ ಬೆಳೆದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ರಾಮೀಣ ರೈತರ ಬದುಕಿನ ಮೇಲೆ ಭಾರೀ ಹೊಡೆತ ನೀಡಿದ್ದು, ರೈತರ ಭವಿಷ್ಯ ಪ್ರಶ್ನಾರ್ಥಕವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP