
ಕೋಲಾರ, ೦೫ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೋಲಾರ ಕ್ರೀಡಾ ಸಂಘದ ವತಿಯಿಂದ ನಗರದ ಟೇಕಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಮಕ್ಕಳ ಉಧ್ಯಾನವನದಲ್ಲಿ ಹಮ್ಮಿಕೊಂಡಿರುವ ಡಿ. ಸುಧಾಕರ್ ಸ್ಮರಣಾರ್ಥ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ಹಿರಿಯ ವಿಜ್ಞಾನಿ ಮಾಗೂ ಕೋಲಾರ ಕೃಷಿ ಕೇಂದ್ರದ ಮುಖ್ಯಸ್ಥ ಶಿವಾನಂದ ಹೊಂಗಲ್, ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾನಂದ ಹೊಂಗಲ, ಕೋಲಾರ ಕ್ರೀಡಾ ಸಂಘ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ. ೩೯ ವರ್ಷಗಳಿಂದ ಸತತವಾಗಿ ಉಚಿತವಾಗಿ ಸಮಾಜಮುಖಿ ಕಾರ್ಯವನ್ನು ನಡೆಸಿಕೊಂಡು ಬಂದಿರುವುದು ಬೃಹತ್ ಸಾಧನೆಯೇ ಸರಿ. ಒಂದು ದಿನ ಎಲ್ಲಾ ಮಕ್ಕಳನ್ನು ಟಮಕದಲ್ಲಿರುವ ಕೃಷಿ ಕೇಂದ್ರಕ್ಕೆ ಕರೆತರುವಂತೆ ಆಹ್ವಾನಿಸಿದ ಅವರು ಮಕ್ಕಳಿಗೆ ಹಸು, ಕುರಿ ಸಾಕಾಣಿಕೆ, ಕೃಷಿಯ ವಿವಿಧ ಮಜಲುಗಳ ಬಗ್ಗೆ ಮತ್ತು ಸೀಡ್ ಬಾಲ್ ಮಾಡುವ ಬಗ್ಗೆ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಪರಮೇಶ್ವರ್ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳು ನೆಲದ ಘಮಲನ್ನು ಮರೆತಿದ್ದು ಅವರಿಗೆ ಹೊಲಗದ್ದೆಗಳ ಪರಿಚಯ ನೀಡಬೇಕಾಗಿದೆ. ನಾನೂ ಶಿವಾನಂದ ಹೊಂಗಲ ಅವರೊಂದಿಗೆ ಕಾರ್ಯಕ್ರಮ ಆಯೋಜಿಸಲು ಸಹಕರಿಸುತ್ತೇನೆ. ಮಕ್ಕಳನ್ನು ಒಂದು ದಿನ ಕೃಷಿ ಕೇಂದ್ರಕ್ಕೆ ಕರೆತರಲು ಕೋರಿದರು.
ಕೆ.ಎಸ್. ಗಣೇಶ್ ಮಾತನಾಡಿ ಸುಮಾರು ಇಪ್ಪತ್ತೆöÊದು ಮೂವತ್ತು ವರ್ಷಗಳಿಂದ ಕೋಲಾರ ಕ್ರೀಡಾ ಸಂಘದ ಸಂಪರ್ಕದಲ್ಲಿರುವ ತಮಗೆ ಸಂಘದ ಸಮಾಜಮುಖಿ ಕಾರ್ಯಗಳ ಬಗ್ಗೆ ಬಹಳ ಅಭಿಮಾನವಿದೆ. ದೈಹಿಕ ಶಿಕ್ಷಕ ಸುಧಾಕರ್ ರವರು ನಿಧನರಾಗಿ ಸುಮಾರು ವರ್ಷಗಳೇ ಕಳೆದರೂ ಅವರ ಹೆಸರಿನಲ್ಲಿ ಬೇಸಿಗೆ ಶಿಬಿರ ನಡೆಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸುತ್ತಿರುವ ಸಂಘದ ಕಾರ್ಯಕ್ಕೆ ಧನ್ಯವಾದ ತಿಳಿಸಿದರು. ಈ ಸಂಘವು ಉಚಿತವಾಗಿ ಬೇಸಿಗೆ ಶಿಬಿರ ನಡೆಸುತ್ತಿರುವ ಕಾರಣ ಕೋಲಾರದಲ್ಲಿ ಬೇಸಿಗೆ ಶಿಬಿರದ ವಾಣಿಜ್ಯೀಕರಣಕ್ಕೆ ಕಡಿವಾಣ ಬಿದ್ದಿದೆ ಎಂದು ಅಭಿಪ್ರಾಯಪಟ್ಟರು.
ಓಂಶಕ್ತಿ ಚಲಪತಿ ಮಾತನಾಡಿ, ಹಲವು ಸಂಘಗಳು ಕೋಲಾರದಲ್ಲಿ ಬೇಸಿಗೆ ಶಿಬಿರವನ್ನು ಸಂಘಟಿಸಲು ಯತ್ನಿಸಿ ಎರಡು ಮೂರು ವರ್ಷಕ್ಕೆ ನಿಲ್ಲಿಸಿದ್ದರೂ ನಮ್ಮ ಕೋಲಾರ ಕ್ರೀಡಾ ಸಂಘ ಸುದೀರ್ಘ ಕಾಲದಿಂದಲೂ ಬೇಸಿಗೆ ಶಿಬಿರವನ್ನು ಸಂಘಟಿಸುತ್ತಿರುವುದು ಸಾಮಾನ್ಯ ಕಾರ್ಯವಲ್ಲ. ಇದಕ್ಕೆ ಕಾರಣರಾದ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು. ಸಂಘದ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ತಾವು ಸದಾ ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಾಮಾ ಅನಿಲ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ನಿಕಟಪೂರ್ವ ಖಜಾಂಚಿ ವಿಜಯ್, ತರಬೇತುದಾರರಾದ ಸುರೇಶ್ ಬಾಬು (ಕಮಾಂಡೋ), ರಾಧೇಯ, ಹಿರಿಯ ಖೋಖೋ ಆಟಗಾರ್ತಿ ಪದ್ಮಾ ಕಾಮತ್, ಸಹಾಯಕ ತರಬೇತುದಾರರಾದ ಅಭಿರಾಮ್, ನಂದೀಶ್, ಪವಿತ್ರ, ಜಾನ್, ಬಾಲಾಜಿ, ಭಾಗವಹಿಸಿದ್ದರು. ಹಿರಿಯ ಸದಸ್ಯರಾದ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್