
ನವದೆಹಲಿ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ದೇಶದಲ್ಲಿ ಆನ್ಲೈನ್ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ಗಳು ಶೇಕಡಾ 95ರಷ್ಟು ಏರಿಕೆ ಕಂಡಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.
ಶನಿವಾರ ಒಂದೇ ದಿನದಲ್ಲಿ ದೇಶಾದ್ಯಂತ 51 ಲಕ್ಷಕ್ಕೂ ಹೆಚ್ಚು ದೇಶೀಯ ಎಲ್ ಪಿ ಜಿ ಸಿಲಿಂಡರ್ಗಳನ್ನು ವಿತರಿಸಲಾಗಿದ್ದು, ಇಂಧನ ಪೂರೈಕೆ ಕುರಿತು ಜನರಲ್ಲಿ ಉಂಟಾದ ಆತಂಕದಿಂದ ಬುಕ್ಕಿಂಗ್ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಇಂಧನ ಭದ್ರತೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ‘ಮಿಷನ್ ಮೋಡ್’ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೆಟ್ರೋಲಿಯಂ ಸಚಿವಾಲಯದಿಂದ ಹಿಡಿದು ವಿದೇಶಾಂಗ ಸಚಿವಾಲಯ ಎಲ್ಲಾ ಸಂಬಂಧಿತ ಇಲಾಖೆಗಳನ್ನು ಸಮನ್ವಯಗೊಳಿಸಿ ನಿರಂತರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಸಾಕಷ್ಟು ಸಂಗ್ರಹ: ಸರ್ಕಾರದ ಭರವಸೆ
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಯ ಸಮರ್ಪಕ ಸಂಗ್ರಹವಿದ್ದು, ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪೂರೈಕೆ ಸರಪಳಿಯನ್ನು ಬಲಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಡೆಲಿವರಿ ದೃಢೀಕರಣ ವ್ಯವಸ್ಥೆಯ ವ್ಯಾಪ್ತಿಯನ್ನು ಫೆಬ್ರವರಿಯಲ್ಲಿ ಶೇ.53ರಿಂದ ಶೇ.90ಕ್ಕೆ ವಿಸ್ತರಿಸಲಾಗಿದೆ.
ಪಿ ಎನ್ ಜಿ ಜಾಲ ವಿಸ್ತರಣೆ
ಎಲ್ ಪಿ ಜಿ ಮೇಲಿನ ಅವಲಂಬನೆ ಕಡಿಮೆ ಮಾಡಲು ಪೈಪ್ ನ್ಯಾಚುರಲ್ ಗ್ಯಾಸ್ ಜಾಲ ವಿಸ್ತರಣೆಗೂ ಒತ್ತು ನೀಡಲಾಗುತ್ತಿದೆ. ಮಾರ್ಚ್ನಿಂದ 3.6 ಲಕ್ಷ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗಿದೆ. ವಸತಿ ಶಾಲೆಗಳು, ಹಾಸ್ಟೆಲ್ಗಳು ಮತ್ತು ಸಮುದಾಯ ಅಡುಗೆಮನೆಗಳನ್ನು 5 ದಿನಗಳಲ್ಲಿ ಪಿ ಎನ್ ಜಿ ಸಂಪರ್ಕಕ್ಕೆ ತರಲು ನಿರ್ದೇಶಿಸಲಾಗಿದೆ.
ಸಮುದ್ರ ಮತ್ತು ಸಾರಿಗೆ ಮೇಲ್ವಿಚಾರಣೆ
ಪಶ್ಚಿಮ ಪರ್ಷಿಯನ್ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 460 ಭಾರತೀಯ ನಾವಿಕರು ಹಾಗೂ 17 ಹಡಗುಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದು, ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಕಾರ್ಯಾಚರಣೆಗಳು ಸಾಮಾನ್ಯವಾಗಿವೆ.
ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ
ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಲು ವಿದೇಶಾಂಗ ಸಚಿವಾಲಯ ನಿರಂತರ ಸಂಪರ್ಕದಲ್ಲಿದೆ. ವಿಮಾನಯಾನ ಸೇವೆಗಳು ಸುಧಾರಣೆಯೊಂದಿಗೆ ಫೆಬ್ರವರಿ 28ರಿಂದ ಇದುವರೆಗೆ 7.02 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಭಾರತಕ್ಕೆ ವಾಪಸ್ಸಾಗಿದ್ದಾರೆ.
ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
1955ರ ಅಗತ್ಯ ಸರಕುಗಳ ಕಾಯ್ದೆಯಡಿ ಸರಕುಗಳ ಚಲನೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳನ್ನು ತಡೆಯಲು ಪ್ರತಿದಿನ ಪತ್ರಿಕಾಗೋಷ್ಠಿ ನಡೆಸುವಂತೆ ರಾಜ್ಯಗಳಿಗೆ ನಿರ್ದೇಶಿಸಲಾಗಿದೆ.
ಇದರಿಂದಾಗಿ, ದೇಶದಲ್ಲಿ ಇಂಧನ ಪೂರೈಕೆ ಸ್ಥಿರವಾಗಿರುವುದಾಗಿ ಸರ್ಕಾರ ಪುನರುಚ್ಚರಿಸಿದ್ದು, ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa