
ಗದಗ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : 11 ರಿಂದ 16 ವಯಸ್ಸಿನ ಮಕ್ಕಳಿಗಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ 10 ದಿನಗಳ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸ ಹಾಗೂ ನೈತಿಕ ಮೌಲ್ಯಗಳ ಬೆಳೆಸುವ ಉದ್ದೇಶ ಹೊಂದಿದೆ.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿ ಡಿವೈಪಿಸಿ ರವಿಪ್ರಕಾಶ್, ವಿಷಯ ಪರಿವೀಕ್ಷಕರು ಹೆಚ್.ಬಿ. ರೆಡ್ಡರ್, ಗದಗ ಗ್ರಾಮೀಣದ ಜೆ.ಎ. ಭಾವಿಕಟ್ಟಿ, ಗದಗ ನಗರದ ಬಿಆರ್ಸಿ ಎಸ್.ಪಿ. ಪ್ರಭಯ್ಯಮಠ ಹಾಗೂ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ನೈತಿಕ ಶಿಕ್ಷಣ, ಮೌಲ್ಯ ಶಿಕ್ಷಣ, ಸ್ವತಃನ ಪರಿವರ್ತನೆ, ಅಧ್ಯಾತ್ಮ ಲೋಕದ ಅಚ್ಚರಿಯ ರಹಸ್ಯಗಳು, ಆರೋಗ್ಯ ಜ್ಞಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ಜೊತೆಗೆ ಶ್ಲೋಕ ಪಠಣ, ವಚನ, ಜ್ಞಾನಯುಕ್ತ ಗೀತೆಗಳು, ರಾಜಯೋಗ ಮೆಡಿಟೇಶನ್, ಯೋಗಾಸನ, ಪ್ರಾಣಾಯಾಮ, ಗುಡ್ ಮ್ಯಾನರ್ಸ್, ಕ್ರಾಫ್ಟ್, ಚಿತ್ರಕಲೆ ಹಾಗೂ ಮೆಮೋರಿ ಮ್ಯಾನೇಜ್ಮೆಂಟ್ ತರಬೇತಿಗಳನ್ನು ಸಹ ಒಳಗೊಂಡಿದೆ.
ಈ ಶಿಬಿರವು ಏಪ್ರಿಲ್ 08 ರಿಂದ ಏಪ್ರಿಲ್ 18ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಗದಗ ನಗರದಲ್ಲಿ ಮೂರು ಕೇಂದ್ರಗಳಲ್ಲಿ ನಡೆಯಲಿದೆ. ಬಸವೇಶ್ವರ ನಗರ, ಡಂಬಳ ನಾಕಾ ಸಿದ್ದರಾಮೇಶ್ವರ ನಗರ ಹಾಗೂ ಹೊಸಪೇಟೆ ಚೆಕ್, ಬೆಟಗೇರಿ ಪ್ರದೇಶಗಳ ಬ್ರಹ್ಮಾಕುಮಾರೀಸ್ ಕೇಂದ್ರಗಳಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ ಹಾಗೂ ಶಾಲೆಯ ವಿವರಗಳನ್ನು ಸಂಬಂಧಿತ ಕೇಂದ್ರಗಳ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಿ ನೋಂದಣಿ ಮಾಡಿಕೊಳ್ಳಬೇಕು. ಶಿಬಿರದಲ್ಲಿ ಪೂರ್ಣ ಹಾಜರಾತಿ ಹೊಂದಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಗುವುದು. ಪಾಲ್ಗೊಳ್ಳುವ ಮಕ್ಕಳು ಪೆನ್, ಪುಸ್ತಕ, ಯೋಗಾಸನಕ್ಕೆ ಬೇಕಾದ ಬೆಡ್ಶೀಟ್ ಹಾಗೂ ನೀರಿನ ಬಾಟಲ್ ತರಬೇಕು ಎಂದು ಸೂಚಿಸಲಾಗಿದೆ.
ಈ ವೇಳೆ ಮಾತನಾಡಿದ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು, “ಈ ಶಿಬಿರವು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಒಟ್ಟಾರೆ, ಮಕ್ಕಳಲ್ಲಿ ನೈತಿಕತೆ, ಆತ್ಮವಿಶ್ವಾಸ ಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಈ ಉಚಿತ ಬೇಸಿಗೆ ಶಿಬಿರ ಸಹಾಯಕವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP