
ಗದಗ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶದ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 119 ನೇ ಜಯಂತ್ಯೋತ್ಸವವನ್ನು ರವಿವಾರ ಜಿಲ್ಲಾಡಳಿತ ಭವನದಲ್ಲಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಗದಗ - ಬೆಟಗೇರಿ, ಗದಗ ಜಿಲ್ಲೆಯ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜರುಗಿದ ಡಾ. ಬಾಬು ಜಗಜೀವನ ರಾಂ ಅವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಅವರು ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಅವರು ಬಾಬು ಜಗಜೀವನ ರಾಂ ಅವರು ನಮ್ಮ ದೇಶದ ಸಾಮಾಜಿಕ ಸುಧಾರಣೆಗೆ, ಮಹಿಳಾ ಶಿಕ್ಷಣಕ್ಕೆ, ಅಲ್ಪಸಂಖ್ಯಾತ ಹಕ್ಕುಗಳಿಗೆ, ಮತ್ತು ಪರಿಸರ ಸಂರಕ್ಷಣೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಹಸಿರು ಕ್ರಾಂತಿ ಸೇರಿದಂತೆ ಆಹಾರ ಭದ್ರತೆ, ಸಮಾನತೆ ಮತ್ತು ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿದವರು. ತಮ್ಮದೇ ಚಿಂತನೆಗಳ ಮೂಲಕ ಸಮಾಜದ ಪ್ರಗತಿಗೆ ದಾರಿದೀಪವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಇಂದು ಸರಳವಾಗಿ ಜಯಂತಿ ಆಚರಣೆ ಮಾಡಲಾಗಿದೆ. ಇದೇ 14 ಏಪ್ರಿಲ್ ರಂದು ದೇಶದ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರುಗಳ ಜಯಂತಿ ಯನ್ನು ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್ ಎನ್ ಬಳ್ಳಾರಿ, ಡಿ ಜಿ ಜೋಗಣ್ಣನವರ, ಸತೀಶ್ ಹೂಲಿ, ಬೇಲೂರ, ಪ್ರವೀಣ ಸೂಡಿ, ಡಿ ವೈ ಎಸ್ ಪಿ ಮುರ್ತುಜಾ ಖಾದ್ರಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್ ಎಸ್ ಬುರಡಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್ ಬಿ ಹುಲಗಣ್ಣವರ, ಸಮಾಜದ ಪ್ರಮುಖರು, ದಲಿತ ಚಿಂತಕರು,ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದ ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP