
ಚರೈಡಿಯೋ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅಸ್ಸಾಂ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಬಿಜೆಪಿ ಕಾರ್ಯಕರ್ತನ ಹತ್ಯೆ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ.
ಚರೈಡಿಯೋ ಜಿಲ್ಲೆಯ ಸೋನಾರಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಈ ದುರ್ಘಟನೆಯಲ್ಲಿ ಖುದ್ಕನ್ ಬೋರಾ ಎಂಬ ಬಿಜೆಪಿ ಕಾರ್ಯಕರ್ತನನ್ನು ದುಷ್ಕರ್ಮಿಗಳು ಕೋಲುಗಳಿಂದ ಹೊಡೆದು ಕೊಂದಿದ್ದಾರೆ. ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ದಾಳಿ ನಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಜೈ ಭಾರತ್ ಪಕ್ಷದ ಬೆಂಬಲಿಗರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಿಲೇಶ್ವರ ಮುರ್ಮು ಎಂಬ ವ್ಯಕ್ತಿಯ ಮೇಲೆ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಬಳಿಕ ಸೋನಾರಿ ಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅನಾಹುತ ತಪ್ಪಿಸಲು ಭದ್ರತೆಯನ್ನು ಹೆಚ್ಚಿಸಲಾಗಿದೆ. ಸ್ಥಳೀಯರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸೋನಾರಿ ಶಾಸಕ ಧರ್ಮೇಶ್ವರ ಕೊನ್ವಾರ್, “ರಸ್ತೆಯಲ್ಲಿ ಕಾರ್ಯಕರ್ತನನ್ನು ತಡೆದು ಹೊಡೆದು ಕೊಲ್ಲುವುದು ಅತ್ಯಂತ ಖಂಡನೀಯ. ಇಂತಹ ಹಿಂಸಾಚಾರಕ್ಕೆ ಸಮಾಜದಲ್ಲಿ ಯಾವುದೇ ಸ್ಥಳವಿಲ್ಲ” ಎಂದು ಹೇಳಿದ್ದಾರೆ.
ಚುನಾವಣಾ ಅವಧಿಯಲ್ಲಿ ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿ ಪರಿಣಮಿಸಿದ್ದು, ಕಾನೂನು-ಸುವ್ಯವಸ್ಥೆ ಕಾಪಾಡಲು ಪೊಲೀಸರು ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa