





ಕೊಪ್ಪಳ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಮಾಜದಲ್ಲಿ ಸರ್ವರಿಗೂ ಸಮಾನತೆಗಾಗಿ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಈ ಇಬ್ಬರು ಮಹನೀಯರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಕೊಪ್ಪಳ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ 'ಹಸಿರು ಕ್ರಾಂತಿ'ಯ ರೂವಾರಿ ಡಾ. ಬಾಬು ಜಗಜೀವನ ರಾಮ್ ರವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸವನ್ನು ಬಾಬು ಜಗಜೀವನ್ ರಾಮ್ ರವರು ಮಾಡಿದ್ದಾರೆ. ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಆಹಾರ ಉತ್ಪಾದನೆಗೆ ಒತ್ತು ಕೊಟ್ಟು, ಅದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳಿಂದಾಗಿ ಜಗಜೀವನ ರಾಮ್ ಅವರಿಗೆ ಹಸಿರು ಕ್ರಾಂತಿಯ ಹರಿಕಾರರೆಂದು ಕರೆಯಲಾಗುತ್ತದೆ. ದೇಶಕ್ಕೆ, ಶ್ರಮಿಕ ಹಾಗೂ ಶೋಷಿತ ವರ್ಗಕ್ಕೆ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಡಾ. ಬಾಬು ಜಗಜೀವನ ರಾಮ್ ರವರ ಜೀವನ ಸಾಧನೆಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಜನರಿಗೆ ತಿಳಿಸಿವೆ. ಅವರ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಡಾ.ಸುರೇಶ್ ಬಿ. ಇಟ್ನಾಳ ಅವರು ಮಾತನಾಡಿ, ಭಾರತದ ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಬಾಬುಜಿಯವರ ಕೊಡುಗೆ ಅನನ್ಯವಾಗಿದೆ. ಅವರು ಹಾಕಿಕೊಟ್ಟ ಸಾಮಾಜಿಕ ಸಮಾನತೆಯ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. 1968ರಲ್ಲಿ ಬಾಬು ಜಗಜೀವನ ರಾಮ್ ಅವರ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿತ್ತು. ಆ ಸಮಯದಲ್ಲಿ ಅವರು ಭಾರತದ ಕೇಂದ್ರ ಕೃಷಿ ಮತ್ತು ಆಹಾರ ಸಚಿವರಾಗಿ ಸೇವೆ ಸಲ್ಲಿಸಿದರು. 1968ರ ಅವಧಿಯಲ್ಲಿ ದೇಶವು ಆಹಾರದ ಬಿಕ್ಕಟ್ಟಿನಲ್ಲಿದ್ದಾಗ, ಡಾ. ಬಾಬು ಜಗಜೀವನ ರಾಮ್ ರವರು ತೋರಿದ ದೃಢ ನಿರ್ಧಾರಗಳು ಮತ್ತು ಅದು ನಾಯಕತ್ವ ಇಂದಿಗೂ ಸ್ಮರಣೀಯ. ಕೃಷಿ ಸಚಿವರಾಗಿ ಅವರು ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳ ಫಲವಾಗಿ ಭಾರತವು ಆಹಾರದ ದಾಸ್ತಾನು ಮಾಡುವಲ್ಲಿ ಯಶಸ್ವಿಯಾಯಿತು. 1968ರ ಹಸಿರು ಕ್ರಾಂತಿಯ ಯಶಸ್ಸು ಬಾಬುಜಿಯವರ ಆಡಳಿತಾತ್ಮಕ ಚಾಕಚಕ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕುಕನೂರು ತಾಲ್ಲೂಕು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಪ್ರಭುರಾಜ ಕೆ.ಎನ್. ಅವರು ವಿಶೇಷ ಉಪನ್ಯಾಸ ನೀಡಿ, ಡಾ. ಬಾಬು ಜಗಜೀವನ ರಾಮ್ ರವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಹಾಗೂ ರಾಜಕಾರಣಿಗಳಲ್ಲಿ ಪ್ರಮುಖ ಸ್ಥಾನ ಪಡೆದವರು. ಅವರ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಅರ್ಪಿಸಿದ ಮಹಾತ್ಮರು. ಅವರು 1920ರಲ್ಲಿ ದಶಕದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹಾತ್ಮ ಗಾಂಧಿಜೀಯವರ ಮಾರ್ಗದರ್ಶನದಲ್ಲಿ ಹೋರಾಟ ನಡೆಸಿದರು. ಜಗಜೀವನ ರಾಮ್ ರವರು ದಲಿತ ಸಮುದಾಯದ ಹಕ್ಕುಗಳಿಗಾಗಿ ಧೈರ್ಯದಿಂದ ಹೋರಾಡಿ, ಸಮಾಜದಲ್ಲಿ ಸಮಾನ ಅವಕಾಶಗಳು ಲಭಿಸುವಂತೆ ಶ್ರಮಿಸಿದವರು. ಸ್ವಾತಂತ್ರ್ಯ ನಂತರ ಅವರು ಕೇಂದ್ರ ಸಚಿವರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಕೃಷಿ, ರಕ್ಷಣಾ ಹಾಗೂ ಕಾರ್ಮಿಕ ಕ್ಷೇತ್ರಗಳಲ್ಲಿ ಅವರು ಕೈಗೊಂಡ ಕ್ರಮಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾಗಿವೆ. 'ಸಮಾನತೆ ಇಲ್ಲದೆ ಸ್ವಾತಂತ್ರ್ಯ ಸಂಪೂರ್ಣವಾಗುವುದಿಲ್ಲ' ಎಂಬುದು ಡಾ. ಬಾಬು ಜಗಜೀವನ ರಾಮ್ ರವರ ಜೀವನದ ಪ್ರಮುಖ ಸಂದೇಶವಾಗಿದೆ. ಈ ಚಿಂತನೆ ಇಂದಿಗೂ ಪ್ರಸ್ತುತವಾಗಿದ್ದು, ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣ ಮೂರ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ಸಮಾಜದ ಮುಖಂಡರಾದ ಗಾಳೆಪ್ಪ ಪೂಜಾರ್, ಗವಿಸಿದ್ದಪ ಕಂದಾರಿ, ಚನ್ನಬಸಪ್ಪ ಹೊಳೆಯಪ್ಪನವರ, ಡಾ. ಜ್ಞಾನಸುಂದರ, ಗವಿಸಿದ್ದಪ್ಪ ಗಿಣಿಗೇರಾ, ಜಿ.ಎಂ ಬಲ್ಲದ್, ರಮೇಶ ಗಿಣಿಗೇರಿ, ಸಿದ್ರಾಮ ಹೊಸಮನಿ, ರಾಮಣ್ಣ ಚೌಡ್ಕಿ, ಮಲ್ಲಿಕಾರ್ಜುನ ಪೂಜಾರ್, ಚಂದ್ರುಸ್ವಾಮಿ ಬಹದ್ದೂರ್ ಬಂಡಿ, ಮಲ್ಲು, ಹನುಮೇಶ ಕಡೇಮನಿ, ದ್ಯಾಮಣ್ಣ ಚಾಮಲಾಪೂರ, ರಾಮಣ್ಣ ಕಂದಾರಿ ಹಾಗೂ ಹಲವು ಮುಖಂಡರು, ಇತರೆ ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ : ಬಾಬು ಜಗಜೀವನ ರಾಮ್ ರವರ 119ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಹಯೋಗದಲ್ಲಿ ನಗರದ ಹೊಸಪೇಟೆ ರಸ್ತೆಯ ಕಿಶೋರಿ ಪೆಟ್ರೋಲ್ ಬಂಕ್ ಹತ್ತಿರದ ಶಿವಶಾಂತವೀರ ನಗರದ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಮಹನೀಯರ (ಅಂಬೇಡ್ಕರ್, ಬಸವೇಶ್ವರ ಹಾಗೂ ಬಾಬು ಜಗಜೀವನ್ರಾಂ ರವರ) ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಅದ್ದೂರಿ ಮೆರವಣಿಗೆ : ಹಸಿರು ಕ್ರಾಂತಿ'ಯ ರೂವಾರಿ ಡಾ. ಬಾಬು ಜಗಜೀವನ ರಾಮ್ ರವರ 119ನೇ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ತಹಶೀಲ್ದಾರ ಕಛೇರಿ ಆವರಣದಿಂದ ನಡೆದ ಡಾ.ಬಾಬು ಜಗಜೀವನ ರಾಮ್ ರವರ ಭಾವಚಿತ್ರಕ್ಕೆ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ್ ಬಿ. ಇಟ್ನಾಳ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಅಜ್ಜಪ್ಪ ಸೊಗಲದ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್, ಡಿಡಿಪಿಐ ಸೋಮಶೇಖರಗೌಡ ಪಾಟೀಲ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ ಕಛೇರಿಯ ಬಸವರಾಜ ತನ್ನಳ್ಳಿ, ತಾಲೂಕು ಪಂಚಾಯತ್ ಇಒ ದುಂಡಪ್ಪ ತುರಾದಿ, ಕೊಪ್ಪಳ ಸಮಾಜ ಕಲ್ಯಾಣ ಅಧಿಕಾರಿ ಶರಣಪ್ಪ, ವಿವಿಧ ಸಂಘಟನೆಗಳ ಮುಖಂಡರು ಮತ್ತು ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಿಬ್ಬಂದಿ ಹಾಗೂ ತಹಶೀಲ್ದಾರರು ಕಚೇರಿ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
ಮೆರವಣಿಗೆಯು ತಹಶೀಲ್ದಾರ ಕಛೇರಿಯ ಆವರಣದಿಂದ ಆರಂಭವಾಗಿ ಸಾಲಾರಜಂಗ್ ರಸ್ತೆ, ಗಡಿಯರ ಕಂಬದ ಮಾರ್ಗವಾಗಿ ಗಾಂಧಿ ಭವನ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಮತ್ತು ಇತರೆ ಕಲಾತಂಡಗಳು ಪ್ರದರ್ಶನ ನೀಡುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದವು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್