
ಹಾಸನ, 04 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜನಗಣತಿಯ ಹಿನ್ನಲೆಯಲ್ಲಿ ಏಪ್ರಿಲ್ 1ರಿಂದ ಆರಂಭಗೊಂಡಿರುವ ಸ್ವಯಂ ಮನೆಗಣತಿಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ದೇಶದ ಅಭಿವೃದ್ಧಿ ದಿಕ್ಕನ್ನು ನಿರ್ಧರಿಸುವ ಮಹತ್ವದ ಕಾರ್ಯವಾಗಿದ್ದು, “ನಮ್ಮ ಜನಗಣತಿ – ನಮ್ಮ ಅಭಿವೃದ್ಧಿ” ಎಂಬ ಧ್ಯೇಯದೊಂದಿಗೆ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು. ಚುನಾವಣೆಯಲ್ಲಿ ಮತ ಚಲಾಯಿಸುವಂತೆ, ಜನಗಣತಿಯಲ್ಲಿಯೂ ನಿಖರ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜನಗಣತಿಯಿಂದ ಜನಸಂಖ್ಯೆ, ಜೀವನಮಟ್ಟ, ವಾಸಸ್ಥಿತಿ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಅಂಶಗಳ ಕುರಿತು ನಿಖರ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಸರ್ಕಾರಕ್ಕೆ ಪರಿಣಾಮಕಾರಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು.
ಈ ಬಾರಿ ಜನಗಣತಿ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ಎರಡು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 16ರಿಂದ ಮೇ 15ರವರೆಗೆ ಮನೆಪಟ್ಟಿ ಹಾಗೂ ಮನೆಗಣತಿ ನಡೆಯಲಿದ್ದು, ನಂತರದ ಹಂತದಲ್ಲಿ ಜನಸಂಖ್ಯಾ ಗಣತಿ ಕೈಗೊಳ್ಳಲಾಗುತ್ತದೆ. ಮನೆಗಣತಿಯಲ್ಲಿ ಒಟ್ಟು 34 ಪ್ರಶ್ನೆಗಳಿದ್ದು, ಸ್ವಯಂ ಗಣತಿ ಪ್ರಕ್ರಿಯೆಯನ್ನು 10–15 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂದು ವಿವರಿಸಿದರು.
ಸ್ವಯಂ ಗಣತಿ ವ್ಯವಸ್ಥೆಯು ಈ ಬಾರಿ ಮೊದಲ ಬಾರಿಗೆ ಪರಿಚಯವಾಗಿದ್ದು, ಸಾರ್ವಜನಿಕರು ಆನ್ಲೈನ್ ಮೂಲಕ ತಮ್ಮ ಮನೆಯ ಮಾಹಿತಿಯನ್ನು ಸ್ವತಃ ನಮೂದಿಸಬಹುದಾಗಿದೆ. ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಆಗಿ, ಮನೆಯ ಸ್ಥಳವನ್ನು ಡಿಜಿಟಲ್ ನಕ್ಷೆಯಲ್ಲಿ ಗುರುತಿಸಿ, ಕುಟುಂಬದ ವಿವರಗಳನ್ನು ಭರ್ತಿ ಮಾಡಬಹುದು. ಮಾಹಿತಿ ಸಲ್ಲಿಸಿದ ನಂತರ ಸಿಗುವ ಎಸ್ಇ ಐಡಿಯನ್ನು ಗಣತಿದಾರರಿಗೆ ನೀಡುವ ಮೂಲಕ ದೃಢೀಕರಣ ಪ್ರಕ್ರಿಯೆ ಸುಲಭಗೊಳ್ಳುತ್ತದೆ ಎಂದು ಹೇಳಿದರು.
ಮೊಬೈಲ್ ಆಪ್ ಹಾಗೂ ಡಿಜಿಟಲ್ ವ್ಯವಸ್ಥೆಯಿಂದ ಮಾಹಿತಿ ಸಂಗ್ರಹಣೆ ವೇಗವಾಗುವುದರ ಜೊತೆಗೆ ದೋಷಗಳ ಸಾಧ್ಯತೆ ಕಡಿಮೆಯಾಗುತ್ತದೆ. ಡೇಟಾ ಸುರಕ್ಷತೆ ಮತ್ತು ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜನಗಣತಿ ಮಾಹಿತಿ ಸಂಪೂರ್ಣ ರಹಸ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮಾಸ್ಟರ್ ಟ್ರೈನರ್ಗಳಿಗೆ ತರಬೇತಿ ನೀಡಲಾಗಿದ್ದು, ಜಿಲ್ಲಾಮಟ್ಟದಲ್ಲಿ ಫೀಲ್ಡ್ ಟ್ರೈನರ್ಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಗಣತಿದಾರರು ಮತ್ತು ಮೇಲ್ವಿಚಾರಕರಿಗೂ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೆ ಸ್ವಯಂ ಗಣತಿ ಮಾಡಲು ಸಾಧ್ಯವಾಗದಿದ್ದರೆ, ನಿಗದಿತ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ವಿ. ಗಂಗಣ್ಣನವರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa