
ಇಂಫಾಲ, 04 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಈಶಾನ್ಯ ರಾಜ್ಯ ಮಣಿಪುರದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಹಾಗೂ ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮಗಳು ಮತ್ತಷ್ಟು ತೀವ್ರಗೊಂಡಿವೆ. ಟೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಪೊಲೀಸ್ ಠಾಣೆ ವ್ಯಾಪ್ತಿಯ ಯಂಗೂಬಂಗ್ ಗ್ರಾಮದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕಣಿವೆ ಆಧಾರಿತ ಉಗ್ರ ಸಂಘಟನೆಗಳ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕೀಶಾಮ್ ಸುಮಂತ ಮೈಟೈ (25), ಅಂಗೋಮ್ ಸೋಮರ್ಜಿತ್ ಸಿಂಗ್ ಅಲಿಯಾಸ್ ನೊಂಗಾಬಾ (32), ಯುಮ್ನಮ್ ನವೋಬಾ ಸಿಂಗ್ ಅಲಿಯಾಸ್ ಶಿನ್ಸಂಗಂಬಾ (26) ಮತ್ತು ಖುಂದ್ರಕ್ಪಮ್ ಶ್ಯಾಮ್ಸನ್ ಮೈಟೈ ಅಲಿಯಾಸ್ ಮಂಗನ್ಲೀಬಾ (25) ಎಂದು ಗುರುತಿಸಲಾಗಿದೆ. ಇವರಲ್ಲಿ ಕೆಲವರು ಪಿಎಲ್ಎ, ಎನ್ಆರ್ಎಫ್ಎಂ ಹಾಗೂ ಕೆಸಿಪಿ/ಎಂಎಫ್ಎಲ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಯಾವುದೇ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳು ಮತ್ತು ಪ್ರದೇಶ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸಲಾಗಿದೆ. ಗಡಿ ಭಾಗಗಳು ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಿಗಾವಹಿಸುತ್ತಿದ್ದು, ಶಾಂತಿ ಕಾಪಾಡಲು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಅಗತ್ಯ ವಸ್ತುಗಳ ಸರಬರಾಜು ನಿರಂತರವಾಗಿರಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಶುಕ್ರವಾರ ಮಾತ್ರ ರಾಷ್ಟ್ರೀಯ ಹೆದ್ದಾರಿ 37 ಮೂಲಕ 276 ವಾಹನಗಳು ಬಿಗಿ ಭದ್ರತೆಯ ನಡುವೆ ಸಂಚರಿಸಿವೆ. ಸರಕು ಸಾಗಣೆ ವಾಹನಗಳಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಲ್ಲದೆ, ರಾಜ್ಯದ ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ಒಟ್ಟು 117 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಸಂಚಾರದ ಮೇಲ್ವಿಚಾರಣೆ ಕಟ್ಟು ನಿಟ್ಟಾಗಿಸಲಾಗಿದೆ. ಆದಾಗ್ಯೂ, ಈ ಚೆಕ್ಪೋಸ್ಟ್ಗಳಲ್ಲಿ ಬಂಧನಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa